ದೇಣಿಗೆ ಸಂಗ್ರಹದ ತಪ್ಪು ಮಾಹಿತಿ: ಎಎಪಿಗೆ ಚುನಾವಣಾ ಆಯೋಗ ನೋಟಿಸ್‌

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) 2014–15ನೇ ಸಾಲಿನ ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸಗಳಿವೆ. ತಪ್ಪು ಮಾಹಿತಿ ನೀಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಆರೋಪಿಸಿ ಪಕ್ಷಕ್ಕೆ ಚುನಾವಣಾ ಆಯೋಗವು ನೋಟಿಸ್‌ ನೀಡಿದೆ. 

ನೋಟಿಸಿಗೆ 20 ದಿನದೊಳಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಸೂಚಿಸಿದೆ. ಎಎಪಿಯಿಂದ ಪ್ರತಿಕ್ರಿಯೆ ಬಾರದೇ ಇದ್ದರೆ ತನ್ನ ಬಳಿ ಇರುವ ದಾಖಲೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಆಯೋಗ ತಿಳಿಸಿದೆ. 

2014–15ನೇ ಹಣಕಾಸು ವರ್ಷದಲ್ಲಿ ಪಡೆದ ದೇಣಿಗೆಯ ಲೆಕ್ಕಪತ್ರವನ್ನು 2015ರ ಸೆಪ್ಟೆಂಬರ್‌ 30ರಂದು ಆಯೋಗಕ್ಕೆ ಎಎಪಿ ಸಲ್ಲಿಸಿದೆ. 2,696 ದೇಣಿಗೆದಾರರಿಂದ ₹37.45 ಕೋಟಿ ನಿಧಿ ಸಂಗ್ರಹಿಸಲಾಗಿದೆ ಎಂದು ಲೆಕ್ಕಪತ್ರದಲ್ಲಿ ತಿಳಿಸಲಾಗಿತ್ತು. ನಂತರ 2017ರ ಮಾರ್ಚ್‌ 20ರಂದು ಸಲ್ಲಿಸಿದ ಪರಿಷ್ಕೃತ ವರದಿಯಲ್ಲಿ 8,264 ದೇಣಿಗೆದಾರರಿಂದ ₹37.60 ಕೋಟಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. 

ಕೆಲವು ದೇಣಿಗೆಗಳ ಮಾಹಿತಿಯನ್ನು ಎಎಪಿ ಬಹಿರಂಗಪಡಿಸಿಲ್ಲ. ತನ್ನ ವೆಬ್‌ಸೈಟ್‌ನಲ್ಲಿ ತಪ್ಪು ಮಾಹಿತಿ ಪ್ರಕಟಿಸಿದೆ. ಲೆಕ್ಕಪತ್ರದಲ್ಲಿಯೂ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ಸಿಬಿಡಿಟಿಯಿಂದ ಪಡೆದುಕೊಂಡ ದತ್ತಾಂಶದಿಂದ ತಿಳಿದು ಬಂದಿದೆ ಎಂದು ಆಯೋಗ ಹೇಳಿದೆ. 

ಎಎಪಿ ಪಡೆದುಕೊಂಡ ದೇಣಿಗೆಯ ಮೊತ್ತ ₹67.67 ಕೋಟಿ. ಇದರಲ್ಲಿ ₹64.44 ಕೋಟಿಯಷ್ಟು ₹20,001ಕ್ಕಿಂತ ಹೆಚ್ಚಿನ ದೇಣಿಗೆಗಳ ಮೂಲಕ ಸಂಗ್ರಹವಾಗಿದೆ. ಆದರೆ, ಎಎಪಿ ಕೊಟ್ಟ ಲೆಕ್ಕಪತ್ರದ ಪ್ರಕಾರ ಒಟ್ಟು ಆದಾಯ ₹54.15 ಕೋಟಿ ಮಾತ್ರ. ಉಳಿದ ₹13.16 ಕೋಟಿ ಮೊತ್ತವನ್ನು ಅಜ್ಞಾತ ಮೂಲಗಳಿಂದ ಪಡೆದ ದೇಣಿಗೆ ಎಂದು ಪರಿಗಣಿಸಬೇಕಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. 

₹2 ಕೋಟಿ ದೇಣಿಗೆಯನ್ನು ಹವಾಲಾ ದಲ್ಲಾಳಿಗಳ ಮೂಲಕ ಪಡೆಯಲಾಗಿದೆ. ಆದರೆ ಪಕ್ಷವು ಇದನ್ನು ಸ್ವಯಂಪ್ರೇರಿತ ದೇಣಿಗೆ ಎಂದು ಹೇಳಿದೆ ಎಂದು ನೋಟಿಸ್‌ ವಿವರಿಸಿದೆ.

ಚುನಾವಣಾ ಚಿಹ್ನೆ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ರಕಾರ, ತಪ್ಪು ಮಾಹಿತಿ ನೀಡಿದ ಪಕ್ಷದ ಮಾನ್ಯತೆಯನ್ನು ಅಮಾನತುಗೊಳಿಸುವ ಅಥವಾ ಮಾನ್ಯತೆ ಹಿಂತೆಗೆದುಕೊಳ್ಳಲು ಆಯೋಗಕ್ಕೆ ಅವಕಾಶ ಇದೆ. ಎಎಪಿಗೆ ದೆಹಲಿಯಲ್ಲಿ ರಾಜ್ಯಮಟ್ಟದ ಪಕ್ಷದ ಮಾನ್ಯತೆ ಇದೆ.

ಪ್ರಮುಖ ಸುದ್ದಿಗಳು