ಮಂಗಳೂರು: ಬಂದ್‌ ವೇಳೆ ಹೋಟೆಲ್‌ಗೆ ಕಲ್ಲೆಸೆತ, ಒಬ್ಬನ ಬಂಧನ

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರುದ್ಧ ಸೋಮವಾರ ನಡೆದ ಬಂದ್‌ ವೇಳೆ ನಗರದ ಕದ್ರಿ ಮಲ್ಲಿಕಟ್ಟೆಯ ಶಿವಭಾಗ್ ಕೆಫೆ ಹೋಟೆಲ್‌ ಮೇಲೆ ಕಲ್ಲೆಸೆದಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಸುರತ್ಕಲ್‌ ಕಾಟಿಪಳ್ಳ ಮೂರನೇ ಬ್ಲಾಕ್ ನಿವಾಸಿ ಅಮರ್ ಸೋನ್ಸ್ (28) ಬಂಧಿತ ಆರೋಪಿ. ಸೋಮವಾರ ಬೆಳಿಗ್ಗೆ ಬಂದ್‌ ನಡುವೆಯೂ ಶಿವಭಾಗ್‌ ಕೆಫೆ ಹೋಟೆಲ್‌ ತೆರೆದಿತ್ತು. ಆಗ ಅಮರ್‌ ಮತ್ತು ಇನ್ನೊಬ್ಬ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದರು. ಅಮರ್‌ ಕಲ್ಲೆಸೆದಿದ್ದ. ಗಾಜುಗಳಿಗೆ ಹಾನಿಯಾಗಿದ್ದಲ್ಲದೇ ಹೋಟೆಲ್ ಸಿಬ್ಬಂದಿ ಜಯಂತ್‌ ಕಾಮತ್‌ ಎಂಬುವವರು ಗಾಯಗೊಂಡಿದ್ದರು.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಪೊಲೀಸರು ಅಮರ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋ‍ಪಿಯ ಚಹರೆ ಕೂಡ ಪತ್ತೆಯಾಗಿದ್ದು, ಆತನನ್ನು ಶೀಘ್ರದಲ್ಲಿ ಬಂಧಿಸುವುದಾಗಿ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಇಬ್ಬರೂ ಆರೋಪಿಗಳು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು.

 

ಪ್ರಮುಖ ಸುದ್ದಿಗಳು