ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಆಗಲಿ: ಸಚಿವ ಬಂಡೆಪ್ಪ ಕಾಶೆಂಪುರ

ಬೀದರ್‌: ‘ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕು. ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳನ್ನು  ರೂಪಿಸುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಮೊದಲ 20 ಜಿಲ್ಲೆಗಳ ಸಾಲಿನಲ್ಲಾದರೂ ಬೀದರ್‌ನ್ನು ಗುರುತಿಸುವಂತೆ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಕ್ಕಳ ಸಂಖ್ಯೆ 50ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಗುರುತಿಸಬೇಕು. ಮಕ್ಕಳು ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ ಎಂಬುವುದನ್ನು ಪರಿಶೀಲಿಸಬೇಕು. ಶಿಕ್ಷಕರು ಮಕ್ಕಳಿಗೆ ಇಂಗ್ಲಿಷ್‌ ಕಲಿಸಲು ಮುಂದೆ ಬರಬೇಕು’ ಎಂದು ಹೇಳಿದರು.

‘ಕೇವಲ ₹ 4 ಸಾವಿರ ಸಂಬಳ ಪಡೆಯುತ್ತಿರುವ ಖಾಸಗಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವಾಗ ಕೈತುಂಬ ಸಂಬಳ ಪಡೆಯುವ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಏಕೆ ಉತ್ತಮ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಹದಿನೈದು ದಿನಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಬೇಕು. ಶೈಕ್ಷಣಿಕ ಪ್ರಗತಿಯ ಬಗೆಗೆ ನಿರಂತರವಾಗಿ ಸಭೆ ನಡೆಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಡಿಪಿಐ ಉಮೇಶ ಶಿರಹಟ್ಟಿಮಠ, ‘920 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. 420 ಅಭ್ಯರ್ಥಿಗಳು ಮಾತ್ರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. 929 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ನೆಲಸಮಗೊಳಿಸಲು ಈಗಾಗಲೇ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಇದನ್ನು ಬಿಟ್ಟು ಶಾಲೆಗಳಿಗೆ ಕಟ್ಟಡದ ಕೊರತೆ ಇಲ್ಲ’ ಎಂದು ತಿಳಿಸಿದರು.

ಶಾಸಕ ರಹೀಂ ಖಾನ್‌ ಮಧ್ಯಪ್ರವೇಶಿಸಿ, ‘ನಗರದಲ್ಲಿ ಒಂದೇ ಕಟ್ಟಡದಲ್ಲಿ ಎರಡು ಶಾಲೆಗಳು ನಡೆಯುತ್ತಿವೆ. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು.

ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌್, ಚಂದ್ರಶೇಖರ ಪಾಟೀಲ ಹಾಗೂ ಸಿಇಒ ಆರ್‌.ಸೆಲ್ವಮಣಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

ಪ್ರಮುಖ ಸುದ್ದಿಗಳು