ಕೋಚ್ ಕಾರ್ಖಾನೆ ಕಾಮಗಾರಿ ಆರಂಭಕ್ಕೆ ಕೆ.ಎಚ್.ಮುನಿಯಪ್ಪ ಮನವಿ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವಂತೆ ಸಂಸದ ಕೆ.ಎಚ್.ಮುನಿಯಪ್ಪ ಅವರು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಸಚಿವ ಗೋಯಲ್ ಅವರನ್ನು ಭೇಟಿಯಾದ ಮುನಿಯಪ್ಪ, ‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆಗೆ 2014ರಲ್ಲಿ ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ನಡುವೆ ಒಪ್ಪಂದವಾಗಿತ್ತು. ಯೋಜನೆಗೆ ಉಭಯ ಸರ್ಕಾರಗಳು 50:50ರ ಅನುಪಾತದಲ್ಲಿ ಅನುದಾನ ನೀಡಲು ಒಪ್ಪಿದ್ದವು’ ಎಂದು ತಿಳಿಸಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ರೈಲ್ವೆ ಸಚಿವ ಸುರೇಶ್‌ಪ್ರಭು ಅವರಿಗೆ ಪತ್ರ ಬರೆದು ರೈಲ್ವೆ ಕೋಚ್‌ ಕಾರ್ಖಾನೆ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದರು. ಆದರೆ, ಈವರೆಗೂ ಕಾಮಗಾರಿ ಆರಂಭವಾಗಿಲ್ಲ’ ಎಂದು ಹೇಳಿದರು.

‘ಹಾಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿಯಾಗಿ ಕಾರ್ಖಾನೆ ಕಾಮಗಾರಿ ಆರಂಭಕ್ಕೆ ಮನವಿ ಮಾಡಿದ್ದಾರೆ. ಕಾರ್ಖಾನೆ ಸ್ಥಾಪನೆಗೆ ಅಗತ್ಯವಿರುವ ಭೂಮಿ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ವಿವರಿಸಿದರು.

ಪ್ರಮುಖ ಸುದ್ದಿಗಳು