ಆಲಮಟ್ಟಿ ಮಾದರಿಯಲ್ಲಿ ಕಾರಂಜಾ ಸಂತ್ರಸ್ತರಿಗೆ ಪರಿಹಾರ: ಬಂಡೆಪ್ಪ ಕಾಶೆಂಪೂರ

ಬೀದರ್: ‘ಆಲಮಟ್ಟಿ ಸಂತ್ರಸ್ತರಿಗೆ ನೀಡಿರುವ ಪರಿಹಾರದ ಮಾದರಿಯಲ್ಲಿ ಕಾರಂಜಾ ನೀರಾವರಿ ಯೋಜನೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಅನುಕೂಲವಾಗುವಂತೆ ಎಂಟು ದಿನಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ನಗರದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಪೂರ್ವದಲ್ಲಿ ಕಾರಂಜಾ ಸಂತ್ರಸ್ತರು ಹಾಗೂ ರೈತರ ಸಭೆ ನಡೆಸಿದ ಅವರು, ‘ಕಾರಂಜಾ ಸಂತ್ರಸ್ತರ ಅಳಲು ಆಲಿಸಲಾಗಿದೆ. ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ’ ಎಂದು ಹೇಳಿದರು.

‘ಭಾಲ್ಕಿ ತಾಲ್ಲೂಕಿನ ಹುಪಳಾದ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಆದಷ್ಟು ಬೇಗ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದಾರೆ. ರೈತರ ಬಾಕಿ ಪಾವತಿಸುವಂತೆ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಸಕ್ಕರೆ ಕಾರ್ಖಾನೆಗಳಿಗೆ 15 ದಿನಗಳ ಗಡುವು ವಿಧಿಸಿದ್ದರು. ಈಗಾಗಲೇ ಆರು ದಿನಗಳು ಕಳೆದಿವೆ. ನಾರಂಜಾ ಸಕ್ಕರೆ ಕಾರ್ಖಾನೆ ₹ 6 ಕೋಟಿ ಪಾವತಿಸಿದೆ. 9 ದಿನಗಳಲ್ಲಿ ಇನ್ನುಳಿದ ಕಾರ್ಖಾನೆಗಳೂ ಬಾಕಿ ಪಾವತಿಸುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅಂಗವಿಕಲರ ಸಮಸ್ಯೆಗಳನ್ನು ಆಲಿಸಲಾಗಿದೆ. ಅವುಗಳಿಗೆ ಪರಿಹಾರ ಕಲ್ಪಿಸಲು ಸೆಪ್ಟೆಂಬರ್‌ 17 ರಂದು ಮಧ್ಯಾಹ್ನ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳು