ಗಣೇಶ ಮೂರ್ತಿ ಮಳಿಗೆಗಳ ಮೇಲೆ ದಾಳಿ

ಕೋಲಾರ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಗರದ 20ಕ್ಕೂ ಹೆಚ್ಚು ಮಳಿಗೆಗಳ ಮೇಲೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡಿದರು.

ಟಿ.ಚನ್ನಯ್ಯ ರಂಗಮಂದಿರ ರಸ್ತೆ, ಜಿಲ್ಲಾ ಒಕ್ಕಲಿಗರ ವಿದ್ಯಾರ್ಥಿನಿಲಯದ ಮೈದಾನ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ದೊಡ್ಡಪೇಟೆಯಲ್ಲಿನ ಅಂಗಡಿಗಳ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು. ಆದರೆ, ಯಾವುದೇ ಮಳಿಗೆಯಲ್ಲಿ ಪಿಒಪಿ ಮೂರ್ತಿಗಳು ಪತ್ತೆಯಾಗಲಿಲ್ಲ.

ಮಣ್ಣಿನಿಂದ ತಯಾರಿಸಿದ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಮಾರುವಂತೆ ಜಿಲ್ಲಾಧಿಕಾರಿ ಮಾಡಿದ್ದ ಮನವಿಗೆ ಮಳಿಗೆ ಮಾಲೀಕರು ಸ್ಪಂದಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ‘ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಮಳಿಗೆ ಮಾಲೀಕರು ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಮಾರುತ್ತಿದ್ದಾರೆ. ಯಾರೂ ಸಹ ಕಾನೂನು ಉಲ್ಲಂಘಿಸಿಲ್ಲ’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ಆದೇಶದನ್ವಯ ಮಳಿಗೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಪರಿಸರಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟದ ಸಂಬಂಧ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗಿತ್ತು. ಆದರೂ ಕೆಲ ವ್ಯಾಪಾರಿಗಳು ಹೆಚ್ಚಿನ ಹಣ ಸಂಪಾದನೆಗಾಗಿ ಕದ್ದುಮುಚ್ಚಿ ಪಿಒಪಿ ಮೂರ್ತಿಗಳನ್ನು ಮಾರುತ್ತಿರುವುದು ಗಮನಕ್ಕೆ ಬಂದಿದೆ. ಈ ಮೂರ್ತಿಗಳು ಸ್ಥಳೀಯವಾಗಿ ಸಿದ್ಧವಾಗಿಲ್ಲ’ ಎಂದರು.

ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್‌, ಸಹಾಯಕ ಪರಿಸರಾಧಿಕಾರಿ ಮೃತ್ಯುಂಜಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಚಲಪತಿ ಹಾಜರಿದ್ದರು.

ಪ್ರಮುಖ ಸುದ್ದಿಗಳು