ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಜಪಾನ್‌ಗೆ ಜಯ

ಒಸಾಕ, (ಜಪಾನ್‌): ಅಮೋಘ ಆಟ ಆಡಿದ ಜಪಾನ್‌ ತಂಡದವರು ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದ್ದಾರೆ.

ಮಂಗಳವಾರ ನಡೆದ ಹೋರಾಟದಲ್ಲಿ ಜಪಾನ್‌ 3–0 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಸೋಲಿಸಿತು.

ಹಜಿಮ್‌ ಮೋರಿಯಾಸು ಅವರು ಮುಖ್ಯ ಕೋಚ್‌ ಆಗಿ ನೇಮಕಗೊಂಡ ನಂತರ ತಂಡ ಗೆದ್ದ ಮೊದಲ ಪಂದ್ಯ ಇದಾಗಿದೆ.

16ನೇ ನಿಮಿಷದಲ್ಲಿ ಶೊ ಸಸಾಕಿ ಚೆಂಡನ್ನು ಗುರಿ ಮುಟ್ಟಿಸಿ ಜಪಾನ್‌ ತಂಡದ ಖಾತೆ ತೆರೆದರು. ದ್ವಿತೀಯಾರ್ಧದಲ್ಲೂ ಜಪಾನ್‌ ಮೇಲುಗೈ ಸಾಧಿಸಿತು. 66ನೇ ನಿಮಿಷದಲ್ಲಿ ಟಕುಮಿ ಮಿನಾಮಿನೊ ಗೋಲು ದಾಖಲಿಸಿ 2–0ರ ಮುನ್ನಡೆಗೆ ಕಾರಣರಾದರು.

90+3ನೇ ನಿಮಿಷದಲ್ಲಿ ಜುನ್ಯಾ ಇಟೊ ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇನ್ನೊಂದು ಪಂದ್ಯದಲ್ಲಿ ರಷ್ಯಾ 5–1 ಗೋಲುಗಳಿಂದ ಜೆಕ್‌ ಗಣರಾಜ್ಯದ ಮೇಲೆ ಗೆದ್ದಿತು.

ರಷ್ಯಾ ತಂಡದ ಅಲೆಕ್ಸಿ ಲೊನೊವ್‌ (8 ಮತ್ತು 29ನೇ ನಿಮಿಷ), ಜಬೊಲೊಟೊನಿ (24), ಎರೋಕಿನ್ (78) ಮತ್ತು ಪೊಲೊಜ್‌ (83) ಅವರು ಗೋಲು ಗಳಿಸಿ ಗಮನ ಸೆಳೆದರು.

ಇತರ ಪಂದ್ಯಗಳಲ್ಲಿ ಇಂಡೊನೇಷ್ಯಾ 1–0ರಲ್ಲಿ ಮಾರಿಷಸ್‌ ಎದುರೂ, ಮಲೇಷ್ಯಾ 3–1ರಲ್ಲಿ ಕಾಂಬೋಡಿಯಾ ಮೇಲೂ, ಜರ್ಮನಿ 2–1ರಲ್ಲಿ ಪೆರು ವಿರುದ್ಧವೂ ಗೆದ್ದವು.

ಪ್ರಮುಖ ಸುದ್ದಿಗಳು