ವಂಚನೆಯ ಹಣ ವಿದೇಶದಲ್ಲಿ ಹೂಡಿಕೆ

ನವದೆಹಲಿ: ವಜ್ರದ ಉದ್ಯಮಿ ಮೆಹುಲ್‌ ಚೋಕ್ಸಿ ಅವರು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿದ್ದ ಹಣದಲ್ಲಿ ₹3,257.54 ಕೋಟಿಯನ್ನು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆ ಮಾಡಿದೆ.

ಥಾಯ್ಲೆಂಡ್‌, ಅಮೆರಿಕ, ಬೆಲ್ಜಿಯಂ, ಯುಎಇ, ಇಟಲಿ ಜಪಾನ್‌ ಮತ್ತು ಹಾಂಕಾಂಗ್‌ನಲ್ಲಿ ಹೂಡಿಕೆ ಮಾಡಿದ್ದು ಈ ಹಣವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆಯಿಂದಲೇ ಪಡೆದುಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ.

ಬೆಲೆ ಬಾಳುವ ವಜ್ರಾಭರಣಗಳ ವ್ಯಾಪಾರದಲ್ಲೂ ಚೋಕ್ಸಿ ತೊಡಗಿದ್ದಾರೆ ಎಂದು ಅದು ತಿಳಿಸಿದೆ.

ವೈಯಕ್ತಿಕವಾಗಿ ಹಣ ಬಳಕೆ ಮತ್ತು ವರ್ಗಾವಣೆಗಾಗಿ ನಕಲಿ ಕಂಪನಿಗಳ ಹೆಸರುಗಳನ್ನು ಚೋಕ್ಸಿ ಬಳಸುತ್ತಿದ್ದರು. ಈ ಕಂಪನಿಗಳ ಹೆಸರಿನಲ್ಲಿ ಮಾರಾಟ ಮತ್ತು ಖರೀದಿಯ ಬಿಲ್‌ಗಳನ್ನು ಸೃಷ್ಟಿಸಲಾಗುತ್ತಿತ್ತು. ಆದರೆ, ಭೌತಿಕವಾಗಿ ಯಾವುದೇ ಉತ್ಪನ್ನಗಳ ವಹಿವಾಟು ನಡೆಯುತ್ತಿರಲಿಲ್ಲ. ಬ್ಯಾಂಕ್‌ಗಳಿಂದ ಹೆಚ್ಚಿನ ಸೌಲಭ್ಯ ಪಡೆಯಲು ಚೋಕ್ಸಿ ಈ ರೀತಿಯ ಕುತಂತ್ರಗಳನ್ನು ಉಪಯೋಗಿಸುತ್ತಿದ್ದರು ಎಂದು ತಿಳಿಸಿದೆ.

₹400 ಕೋಟಿ ಸಾಲದ ಮೊತ್ತವನ್ನು ಅವರ ಸಂಬಂಧಿಯಾಗಿರುವ ನೀರವ್‌ ಮೋದಿಗೆ ಮತ್ತು ₹360 ಕೋಟಿಯನ್ನು ಮೋದಿ ಅವರ ತಂದೆ ದೀಪಕ್‌ ಮೋದಿಗೆ ವರ್ಗಾಯಿಸಿದ್ದಾರೆ ಎಂದು ಇ.ಡಿ ದಾಖಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚನೆ ಮಾಡಿರುವ ಆರೋಪವನ್ನು ಚೋಕ್ಸಿ ಎದುರಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ನೀರವ್‌ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಜಾರಿ ನಿರ್ದೇಶನಾಲಯದ ಆರೋಪಗಳು ಸುಳ್ಳು ಮತ್ತು ಆಧಾರರಹಿತ. ಕಾನೂನು ಬಾಹಿರವಾಗಿ ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು