ವಿಚ್ಛೇದನಕ್ಕೆ 80ರ ದಂಪತಿ ಮೊರೆ!

ಚಂಡಿಗಡ: ಐದು ದಶಕಗಳ ಕಾಲ ಒಗ್ಗೂಡಿ ಬದುಕು ಸಾಗಿಸಿದ ಲೂಧಿಯಾನದ ದಂಪತಿ ಇಳಿ ವಯಸ್ಸಿನಲ್ಲಿ ಪ್ರತ್ಯೇಕವಾಗಿರಲು ಬಯಸಿದ್ದಾರೆ.

ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿರುವ ಈ ದಂಪತಿ ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

85 ವರ್ಷದ ಪತಿ ಮತ್ತು 83 ವರ್ಷದ ಪತ್ನಿಗೆ ಮೂವರು ಪುತ್ರಿಯರಿದ್ದಾರೆ. ಎಲ್ಲ ಪುತ್ರಿಯರಿಗೆ ಮುದುವೆಯಾಗಿದ್ದು ಉತ್ತಮ ಸಾಂಸರಿಕ ಜೀವನ ನಡೆಸುತ್ತಿದ್ದಾರೆ. ಪತಿ ಮತ್ತು ಪತ್ನಿ ಹಲವು ದಿನಗಳಿಂದ ದೂರವೇ ಉಳಿದಿದ್ದಾರೆ. ಪತಿ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದು, ಪತ್ನಿ ಪ್ರತ್ಯೇಕವಾಗಿ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ವಿಚ್ಛೇದನ ಪಡೆಯದೆ ಉಳಿದ ಜೀವನವನ್ನು ಸಂತೋಷದಿಂದ ಕಳೆಯುವಂತೆ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಈ ದಂಪತಿಯ ಮನವೊಲಿಸುವ ಪ್ರಯತ್ನ ಮಾಡಿದರು. ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನದಿಂದ ದೂರವಾಗದೆ ಪರಸ್ಪರರ ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವಂತೆ ಸಮಾಲೋಚನೆ ನಡೆಸಿದರು. ಆದರೆ, ಅವರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ ಸಫಲವಾಗಿಲ್ಲ. ಇಬ್ಬರೂ ವಿಚ್ಛೇದನ ಪಡೆದುಕೊಳ್ಳಲು ಹಟ ಹಿಡಿದಿದ್ದಾರೆ.

‘ನಮ್ಮಲ್ಲಿ ಈಗ ಅನ್ಯೋನ್ಯತೆ ಉಳಿದಿಲ್ಲ. ಒಂದಾಗಿ ಬಾಳಲು ಸಾಧ್ಯವಿಲ್ಲದ ಕಾರಣ ವಿಚ್ಛೇದನದ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಈ ದಂಪತಿ ತಿಳಿಸಿದ್ದಾರೆ.

ದಂಪತಿಯ ಈ ವಿಚ್ಛೇದನ ಪ್ರಕರಣ ಲೂಧಿಯಾನದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ ಮುಂದೆ ಬಂದಿತ್ತು. ಮನವೊಲಿಕೆಯ ಪ್ರಯತ್ನಗಳು ಯಶಸ್ವಿಯಾಗದ ಕಾರಣ ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ದಂಪತಿಯ ಮೂವರು ಪುತ್ರಿಯರಿಗೂ ನ್ಯಾಯಾಲಯ ಸೂಚಿಸಿದೆ.  ಪುತ್ರಿಯರು ತಮ್ಮ ತಂದೆ–ತಾಯಿ ಮತ್ತೆ ಒಗ್ಗೂಡುವಂತೆ ಕೊನೆಯ ಪ್ರಯತ್ನ ಮಾಡಲಿ ಎನ್ನುವುದು ಅಧಿಕಾರಿಗಳ ಆಶಯ.

ಇದೇ ರೀತಿಯ ಪ್ರಕರಣವೊಂದು ಲೂಧಿಯಾನದಲ್ಲಿ ಈ ಹಿಂದೆ ನಡೆದಿದ್ದ ಲೋಕ ಅದಾಲತ್‌ ಮುಂದೆ ಬಂದಿತ್ತು. ಈ ದಂಪತಿಗೆ 75 ವರ್ಷವಾಗಿತ್ತು. ಇಬ್ಬರ ಜತೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಸಮಾಲೋಚನೆ ನಡೆಸಿ ವಿಚ್ಛೇದನ ಅರ್ಜಿ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ. ಅದು ಫಲ ನೀಡಲಿಲ್ಲ.

ದಂಪತಿ ನಡುವೆ ಅಸಹಿಷ್ಣುತೆ ಹೆಚ್ಚುತ್ತಿರುವುದಕ್ಕೆ ಈ ಪ್ರಕರಣಗಳು ಸಾಕ್ಷಿಯಾಗಿವೆ. ಜತೆಗೆ ವಿಚ್ಛೇದನ ಎನ್ನುವುದು ಈಗ ಒಬ್ಬ ವ್ಯಕ್ತಿಯ ಜೀವನದಲ್ಲಿ ಕಳಂಕ ಎಂದು ಭಾವಿಸುತ್ತಿಲ್ಲ ಮತ್ತು ಇಷ್ಟವಾಗದವರ ಜತೆ ಹೊಂದಾಣಿಕೆಯಿಂದ ಬದುಕು ಸಾಗಿಸಲು ಇಚ್ಛಿಸುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಮುಖ ಸುದ್ದಿಗಳು