ಟೆಸ್ಟ್‌ ಕ್ರಿಕೆಟ್: ಸರಣಿ ಸೋಲಿನ ನಿರಾಶೆ ಮರೆಸಿದ ರಾಹುಲ್–ರಿಷಭ್ ವಿರೋಚಿತ ಹೋರಾಟ

ಲಂಡನ್:‌ ಸೋಲಿನ ನಿರಾಶೆಯನ್ನು ಮರೆಸುವಂತಹ ಆಟವನ್ನು  ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಮಂಗಳವಾರ ಆಡಿದರು.

ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಕೊನೆಯ ದಿನ ರಾಹುಲ್ (149; 224ಎಸೆತ, 20 ಬೌಂಡರಿ, 1ಸಿಕ್ಸರ್) ಮತ್ತು ರಿಷಭ್‌ ಪಂತ್ (114; 146 ಎಸೆತ, 15ಬೌಂಡರಿ, 4ಸಿಕ್ಸರ್) ಆಮೋಘ ಶತಕಗಳನ್ನು ದಾಖಲಿಸಿದರು. ಹೀಗಿದ್ದರೂ ಭಾರತಕ್ಕೆ ಗೆಲುವು ಒಲಿಯಲಿಲ್ಲ. ಭಾರತ ತಂಡವು 94.3 ಓವರ್‌ಗಳಲ್ಲಿ 345 ರನ್‌ ಗಳಿಸಿಸರ್ವಪತನ ಕಂಡಿತು. 118ರನ್‌ಗಳಿಂದ ಪಂದ್ಯ ಜಯಿಸಿದ ಆತಿಥೇಯ ತಂಡವು 4–1ರಿಂದ ಸರಣಿ ತನ್ನದಾಗಿಸಿಕೊಂಡಿತು.

ಗೆಲುವಿಗಾಗಿ 464 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿರುವ ಭಾರತ ತಂಡವು ಹೀನಾಯವಾಗಿ ಸೋಲುವುದನ್ನು ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಪ್ಪಿಸಿದರು. ನಾಲ್ಕನೇ ದಿನವಾದ ಸೋಮವಾರ ಭಾರತ ತಂಡವು 58 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಾಹುಲ್ 46 ರನ್ ಮತ್ತು ಅಜಿಂಕ್ಯ ರಹಾನೆ 10 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಆದರೆ ಕೊನೆಯ ದಿನದ ಪಿಚ್‌ನಲ್ಲಿ ಭಾರತ ತಂಡದ ಬ್ಯಾಟಿಂಗ್ ಬೇಗನೆ ಕುಸಿಯುವ ಸಾಧ್ಯತೆ ಇತ್ತು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ರಾಹುಲ್ ಮತ್ತು ಅಜಿಂಕ್ಯ 117 ರನ್‌ ಸೇರಿಸಿದರು. ಇಬ್ಬರೂ ತಾಳ್ಮೆಯುತ ಬ್ಯಾಟಿಂಗ್ ಮಾಡಿದರು. ಅಜಿಂಕ್ಯ 37 ರನ್‌ ಗಳಿಸಲು 105 ಎಸೆತಗಳನ್ನು ತೆಗೆದುಕೊಂಡರು. ಸ್ಪಿನ್ನರ್ ಮೊಯಿನ್ ಅಲಿ ಈ ಜೊತೆಯಾಟವನ್ನು 36ನೇ ಓವರ್‌ನಲ್ಲಿ ಮುರಿದರು. ಅಜಿಂಕ್ಯ ನಿರ್ಗಮಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಹನುಮವಿಹಾರಿ ಈ ಬಾರಿ ಸೊನ್ನೆ ಸುತ್ತಿದರು. ಅವರ ನಂತರ ಕ್ರೀಸ್‌ಗೆ ಬಂದ ದೆಹಲಿ ಹುಡುಗ ರಿಷಬ್ ಪಂತ್ ಅವರು ರಾಹುಲ್ ಜೊತೆಗೆ ಸುಂದರ ಇನಿಂಗ್ಸ್‌ ಕಟ್ಟಿದರು.

30ನೇ ಟೆಸ್ಟ್‌ ಆಡಿದ ಕೆ.ಎಲ್. ರಾಹುಲ್ ತಮ್ಮ ವೃತ್ತಿಜೀವನದ ಆರನೇ ಶತಕವನ್ನು ದಾಖಲಿಸಿದರು.  ಮೂರನೇ ಟೆಸ್ಟ್‌ ಪಂದ್ಯ ಆಡಿದ ರಿಷಬ್ ಚೊಚ್ಚಲ ಶತಕ ಬಾರಿಸಿದರು.

ರಿಷಬ್ ಅವರಿಗೆ ಇದು ಮೊದಲ ಟೆಸ್ಟ್ ಸರಣಿ. ಹೋದ ತಿಂಗಳು ನಾಟಿಂಗ್‌ಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು. ವಿಕೆಟ್‌ಕೀಪಿಂಗ್‌ನಲ್ಲಿ ಐದು ಕ್ಯಾಚ್‌ ಪಡೆದು ದಾಖಲೆ ಬರೆದಿದ್ದರು.

ಸರಣಿಯ ಮೊದಲ ಎರಡು ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ವೈಫಲ್ಯ ಅನುಭವಿಸಿದ್ದರಿಂದ ರಿಷಬ್ ಸ್ಥಾನ ಪಡೆದಿದ್ದರು.

ಇಂಗ್ಲೆಂಡ್ ತಂಡದ ಅನುಭವಿ ವೇಗಿಗಳು ಮತ್ತು ಸ್ಪಿನ್ನರ್‌ ಎಸೆತಗಳಲ್ಲಿ ಅವರು ನಾಲ್ಕು ಸಿಕ್ಸರ್‌ಗಳನ್ನು ಎತ್ತಿದರು.

ಸರಣಿಯ ಕಳೆದ ನಾಲ್ಕು ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗದೇ ನಿರಾಶರಾಗಿದ್ದ ರಾಹುಲ್ ಕೂಡ ಮಿಂಚಿದರು. ಇವರಿಬ್ಬರೂ 6ನೇ ವಿಕೆಟ್ ಜೊತೆಯಾಟದಲ್ಲಿ 204 ರನ್‌ಗಳನ್ನು ಸೇರಿಸಿದರು.

ಪ್ರಮುಖ ಸುದ್ದಿಗಳು