ಪ್ರಚೋದನಕಾರಿ ಭಾಷಣ: 7 ಮಂದಿ ವಿರುದ್ಧ ಪ್ರಕರಣ

ವಿಟ್ಲ: ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪದ ಮೇರೆಗೆ ಕಾಸರಗೋಡು ಜಿಲ್ಲೆ ಹಿಂದೂ ಐಕ್ಯ ವೇದಿಕೆಯ ಮುಖಂಡ ಪುಷ್ಪರಾಜ ಭಟ್‌ ಸಹಿತ 7 ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿಯ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಬಜರಂಗದಳದ ಪ್ರಖಂಡ ಅಧ್ಯಕ್ಷ ಸುರೇಶ್ ಕೊಟ್ಟಾರಿ, ಚೇತನ್ ಪಿದಮಲೆ, ಭಾಸ್ಕರ್ ಟೈಲರ್ ಶೆಟ್ಟಿಗಾರ್, ವರದರಾಜ್ ಕೊಟ್ಟಾರಿ, ಕೃಷ್ಣಪ್ಪ ಸಾಲಿಯಾನ್, ರಮೇಶ್ ಪೂಜಾರಿ ಎಂಬುವವರು ಇತರ ಆರೋಪಿತರು.

‘ಇದೇ 9ರಂದು ಸಂಜೆ 6.30ಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಜಂಟಿ ಆಶ್ರಯದಲ್ಲಿ ಕಡಂಬುವಿನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕಾಸರಗೋಡು ಹಿಂದೂ ಐಕ್ಯ ವೇದಿಕೆಯ ಮುಖಂಡ ಪುಷ್ಪರಾಜ್ ಭಟ್ ತನ್ನ ಭಾಷಣದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮುಸಲ್ಮಾನರ ಮುಂಜಿ, ಮಸೀದಿಯಲ್ಲಿ ಮೊಳಗುವ ಅಝಾನ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಹಾಗೂ ಮುಸ್ಲಿಮರ ಆಚಾರ-ವಿಚಾರ, ಧಾರ್ಮಿಕ ನಂಬಿಕೆಗಳ ಬಗ್ಗೆ ನಿಂದನೆ ಮಾಡಿದ್ದಾರೆ. ಭಾಷಣದುದ್ದಕ್ಕೂ ಧರ್ಮನಿಂದನೆ, ಜಾತಿನಿಂದನೆ ಮಾಡಿದ್ದು, ಶಾಂತವಾಗಿರುವ ಕಡಂಬು ಪ್ರದೇಶದಲ್ಲಿ ಹಿಂದೂ ಯುವಕರನ್ನು ಕೆರಳಿಸಿ, ಶಾಂತಿಗೆ ಭಂಗವುಂಟು ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಪ್ರಮುಖ ಸುದ್ದಿಗಳು