ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಮಳೆ

ಬೆಂಗಳೂರು:ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಎರಡರಿಂದ ಮೂರು ದಿನಗಳ ಕಾಲ ಅಲ್ಲಲ್ಲಿ ಚೆದುರಿದಂತೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೇವಾಂಶದ ಕೊರತೆಯಿಂದ ರಾಜ್ಯದಲ್ಲಿ ಧಗೆ ಏರಿದೆ. ಎರಡರಿಂದ ಮೂರು ದಿನಗಳು ಮಳೆ ಬಂದರೆ ತೇವಾಂಶ ಪ್ರಮಾಣ ಕೊಂಚ ಸುಧಾರಿಸಲಿದೆ. ಮಂಗಳವಾರ ರಾಜ್ಯದ ಒಳನಾಡಿನಲ್ಲಿ ಕೆಲವು ಕಡೆಗಳಲ್ಲಿ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಬೆಂಗಳೂರು ಸೇರಿದಂತೆ ಎಲ್ಲೂ ಭಾರಿ ಮಳೆ ಆಗುವುದಿಲ್ಲ. ಸಾಧಾರಣದಿಂದ ಹಗುರವಾದ ಮಳೆ ಆಗುವ ಸಾಧ್ಯತೆ ಇದೆ. ಬಿರು ಬಿಸಿಲು ಮತ್ತು ತಾಪಮಾನ ಏರಿಕೆಯಿಂದಾಗಿ ಪ್ರತಿ ದಿನ 4 ರಿಂದ 5 ಮಿ.ಮೀನಷ್ಟು ನೀರು ಆವಿಯಾಗಿ ಹೋಗುತ್ತದೆ. ಕೆಲವು ದಿನಗಳು ಮಳೆ ಬಂದರೆ ತಾಪಮಾನ ಇಳಿಯಲಿದೆ ಎಂದು ಅವರು ಹೇಳಿದರು.

ಕೊಪ್ಪದಲ್ಲಿ ಮಳೆ

ಚಿಕ್ಕಮಗಳೂರು: ನರಸಿಂಹರಾಜಪುರ ಮತ್ತು ಕೊಪ್ಪ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಬಿಸಿಲಿತ್ತು. ಮಳೆ ಬರುವ ಯಾವುದೇ ಲಕ್ಷಣವಿರಲಿಲ್ಲ. ಸಂಜೆ ಇದ್ದಕ್ಕಿದ್ದಂತೆ ಮೋಡ ಕವಿದು ಕತ್ತಲು ಆವರಿಸಿತು. ಒಂದು ಗಂಟೆ ಗುಡುಗು ಸಹಿತ ಉತ್ತಮ ಮಳೆ ಸುರಿಯಿತು. 

ಸಿಡಿಲಿಗೆ ಯುವಕ ಬಲಿ

ತುಮಕೂರು: ಮಂಗಳವಾರ ರಾತ್ರಿ ಸಿಡಿಲು ಬಡಿದು ಶಿರಾ ತಾಲ್ಲೂಕಿನ ದ್ವಾರಾಳು ಗೇಟ್ ಬಳಿಯ ಉಡಸಲಮ್ಮ ದೇವಸ್ಥಾನದ ಬಳಿ ನವೀನ್ (22) ಎಂಬುವವರು ಮೃತಪಟ್ಟಿದ್ದಾರೆ. ತೊಗರಗುಂಟ ಗ್ರಾಮದವರಾದ ಅವರು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬರುತ್ತಿದ್ದಾಗ ಈ ಅವಘಡ ನಡೆದಿದೆ.

ಮಧುಗಿರಿ ತಾಲ್ಲೂಕು ಗುಟ್ಟೆ ಗ್ರಾಮದ ಹೊಲವೊಂದರಲ್ಲಿ ಮೇಯುತ್ತಿದ್ದ ಹಸು ಮತ್ತು ಸಮೀಪದ ಮರದಲ್ಲಿದ್ದ ಕೋತಿ ಸಿಡಿಲಿಗೆ ಬಲಿಯಾಗಿವೆ. ಮೈದನಹೊಸಹಳ್ಳಿಯಲ್ಲಿ ಸಿಡಿಲು ತಾಗಿ ಲಕ್ಷ್ಮಮ್ಮ(55), ವೆಂಕಟಲಕ್ಷ್ಮಮ್ಮ (45) ಕದುರಮ್ಮ(53) ಗಾಯಗೊಂಡಿದ್ದಾರೆ. ಮಹಿಳೆಯರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆ ಸುರಿದಿದೆ. ಸಮೀಪದ ಹೊಂಗೆ ಮರದ ಕೆಳಗೆ ನಿಂತಿದ್ದಾರೆ. ಆಗ ಅದೇ ಮರಕ್ಕೆ ಸಿಡಿಲು ಬಡಿದು ಶಾಖಕ್ಕೆ ಮೂವರಿಗೂ ಸುಟ್ಟ ಗಾಯಗಳಾಗಿವೆ.

ಪ್ರಮುಖ ಸುದ್ದಿಗಳು