ಮಳೆ ಕೊರತೆ:ಮೇವಿಗೆ ಪರದಾಟ

ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದ್ದು, ಮೇವು ಅರಸಿ ಜಾನುವಾರುಗಳೊಂದಿಗೆ ರೈತರು ಬೆಟ್ಟಗುಡ್ಡ ಅಲೆಯುತ್ತಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮನವರಹಟ್ಟಿ ಗ್ರಾಮದ ಪಶುಪಾಲಕ ತಮ್ಮಯ್ಯ ಗೋವುಗಳೊಂದಿಗೆ ಜೋಗಿಮಟ್ಟಿ ಗಿರಿಧಾಮದಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ 35 ಜಾನುವಾರುಗಳೊಂದಿಗೆ 40 ಕಿ.ಮೀ. ದೂರದ ಹಳ್ಳಿಯಿಂದ ಬಂದು ತಿಂಗಳು ಸಮೀಪಿಸುತ್ತಿದೆ. ತಮ್ಮಯ್ಯ ಅವರನ್ನು ಅನುಸರಿಸಲು ಈ ಗ್ರಾಮದ ಇತರರು ಸಜ್ಜಾಗಿದ್ದಾರೆ.

‘ಮುಂಗಾರು ಆರಂಭದಲ್ಲಿ ಸ್ವಲ್ಪ ಮಳೆ ಬಂದಿತ್ತು. ಆಗ ಒಂದಷ್ಟು ಬಿತ್ತನೆ ಕಾರ್ಯ ಮಾಡಲಾಯಿತು. ನಂತರ ಯಾವ ಮಳೆಯೂ ಬರಲಿಲ್ಲ. ಬೆಳೆಯೂ ಒಣಗಿದೆ. ಇದರಿಂದ ಜಾನುವಾರುಗಳಿಗೂ ಮೇವಿನ ಕೊರತೆ ಉಂಟಾಗಿದೆ’ ಎಂದು ಓಡುವ ಮೋಡಗಳತ್ತ ನೋಟ ಬೀರಿದರು ತಮ್ಮಯ್ಯ.

ಊರು ತೊರೆದು ಹಸುಗಳೊಂದಿಗೆ ಕಾಲ್ನಡಿಗೆಯಲ್ಲೇ ಓಡಾಡುವ ಇವರು ಅರಣ್ಯದ ಸಮೀಪ ರಾತ್ರಿ ಬಿಡಾರ ಹುಡುತ್ತಾರೆ. ರಾತ್ರಿ ವೇಳೆ ಸಂಪೂರ್ಣ ನಿದ್ರೆಗೆ ಜಾರುವಂತಿಲ್ಲ. ಇವರ ಬಿಡಾರಕ್ಕೆ ನುಗ್ಗಿದ ಗುಂಪೊಂದು ಈಚೆಗೆ ಹಸುವೊಂದನ್ನು ಕಳವು ಮಾಡಿದೆ. ಈ ನೋವು ಅವರ ನಿದ್ದೆಯನ್ನು ಕಸಿದುಕೊಂಡಿದೆ.

‘ಈ ಮೊದಲು 50ಕ್ಕೂ ಹೆಚ್ಚು ಗೋವುಗಳಿದ್ದವು. ಕಳೆದ ವರ್ಷ ಮೇವಿನ ಕೊರತೆಯಿಂದ ಬಡಕಲಾಗಿ ಕೆಲವು ದನಗಳು ಮೃತಪಟ್ಟವು. ಈಗ 32 ದನಗಳು ಉಳಿದಿವೆ. ಈ ಬಾರಿಯೂ ಬರದ ಛಾಯೆ ಮೂಡಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ’ ಎಂದು ಅಳಲು ತೊಡಿಕೊಂಡರು.

ಪೆತ್ತಮ್ಮನವರಹಟ್ಟಿಯ ಬಹುತೇಕರು ಪಶುಪಾಲನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೇವಿಲ್ಲದೆ ಊರಿನಲ್ಲಿಯೇ ಪರದಾಡುತ್ತಿದ್ದಾರೆ. ತಮ್ಮಯ್ಯ ಅವರಂತೆ ಜಾನುವಾರುಗಳೊಂದಿಗೆ ಬೆಟ್ಟಗುಡ್ಡಗಳ ಹಾದಿ ಹಿಡಿಯುತ್ತಿದ್ದಾರೆ. ಮೇವಿಲ್ಲದೆ ಬಹುತೇಕ ಜಾನುವಾರುಗಳು ಬಡಕಲಾಗುತ್ತಿವೆ.

ಗೋವುಗಳ ಬಗೆಗಿನ ಪೂಜ್ಯ ಭಾವನೆಯಿಂದ ಇವುಗಳ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ‘ಕಷ್ಪಪಟ್ಟು ಸಲಹುತ್ತೇವೆ, ಮಾರಾಟ ಮಾಡುವುದಿಲ್ಲ’ ಎಂದು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ.

‘ತಂದೆಯ ಕಾಲದಿಂದಲೂ ನಾವು ಪಶುಪಾಲನೆ ಮಾಡುತ್ತಾ ಬಂದಿದ್ದೇವೆ. ನಮ್ಮ ಗ್ರಾಮದಲ್ಲಿ ಇನ್ನೂ ಎರಡು ಗುಂಪುಗಳಿವೆ. ಅವುಗಳಲ್ಲಿನ ಜನರೂ ಮೇವು ಅರಿಸಿ ಬೇರೆ ಕಡೆ ಹೋಗಿದ್ದಾರೆ. ಜಾನುವಾರುಗಳ ಸ್ಥಿತಿ ನೋಡಿದರೆ ಮರುಕ ಉಂಟಾಗುತ್ತದೆ’ ಎಂದು ನೋವಿನಿಂದ ನುಡಿದರು.

ಪಶುಪಾಲನೆಯಲ್ಲಿ ತೊಡಗಿದ ಪೆತ್ತಮ್ಮನವರಹಟ್ಟಿ ನಾಯಕ ಸಮುದಾಯದವರು ಹಾಲು ಮಾರಾಟ ಮಾಡುವುದಿಲ್ಲ. ಹಸು, ಕರು ಹಾಗೂ ಗೊಬ್ಬರ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಾರೆ.

ಜೋಗಿಮಟ್ಟಿಯಲ್ಲಿ ಬೀಡು ಬಿಟ್ಟಿರುವ ತಮ್ಮಯ್ಯ ದಿನನಿತ್ಯದ ಆಹಾರ ಸಾಮಗ್ರಿಗಳ ಖರೀದಿಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.

ಗೋಶಾಲೆ ಸ್ಥಾಪನೆಗೆ ಒತ್ತಾಯ

ಜಿಲ್ಲೆಯಲ್ಲಿ ಕಳೆದ ಬಾರಿಯೂ ಬರಗಾಲ ಬಂದಿತ್ತು. ಈ ಬಾರಿಯೂ ಮುಂಗಾರು ವಿಫಲವಾಗಿದ್ದು, ರೈತರು ಹಾಕಿದ ಬೆಳೆಗಳೆಲ್ಲ ಒಣಗಲಾರಂಭಿಸಿವೆ. ಇದರಿಂದ ಜಾನುವಾರುಗಳಿಗೂ ಮೇವಿನ ಸಮಸ್ಯೆ ಉಲ್ಬಣಗೊಂಡಿದೆ. ಕೂಡಲೇ ಸರ್ಕಾರ ಗೋಶಾಲೆ ಸ್ಥಾಪನೆ ಮಾಡಬೇಕು ಎನ್ನುತ್ತಾರೆ ಗೋಪಾಲಕ ತಮ್ಮಯ್ಯ.


***
ಚಳ್ಳಕೆರೆ ತಾಲ್ಲೂಕಿನಲ್ಲಿ 8 ವಾರಕ್ಕೆ ಆಗುವಷ್ಟು ಮಾತ್ರ ಮೇವು ಇದೆ. ಮೇವಿನ ಲಭ್ಯತೆಯ ಕುರಿತು ರೈತರ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದೇವೆ
ಡಾ.ಸಿ.ತಿಪ್ಪೇಸ್ವಾಮಿ, ಪ್ರಭಾರ ಉಪ ನಿರ್ದೇಶಕ

ಪ್ರಮುಖ ಸುದ್ದಿಗಳು