ತಂತ್ರಾಂಶದ ಲೋಪದಿಂದ ಆಧಾರ್‌ನಲ್ಲಿ ಅಕ್ರಮ

ನವದೆಹಲಿ: ‘ಆಧಾರ್ ನೋಂದಣಿ ತಂತ್ರಾಂಶಕ್ಕೆಂದು 2017ರಲ್ಲಿ ಅಭಿವೃದ್ಧಿಪಡಿಸಿದ್ದ ‘ಸೆಕ್ಯುರಿಟಿ ಪ್ಯಾಚ್‌’ನಲ್ಲಿ ಲೋಪಗಳಿವೆ. ಇದರಿಂದ ಆಧಾರ್ ನೋಂದಣಿಯಲ್ಲಿ ಅಕ್ರಮಕ್ಕೆ ಅವಕಾಶ ದೊರೆತಿದೆ’ ಎಂದು ಹಫ್‌ಪೋಸ್ಟ್ ವರದಿ ಮಾಡಿದೆ.

ಆದರೆ ‘ಈ ವರದಿ ಸುಳ್ಳುಗಳಿಂದ ಕೂಡಿದೆ. ಆಧಾರ್ ತಂತ್ರಾಂಶದಲ್ಲಿ ಯಾವುದೇ ಲೋಪಗಳಿಲ್ಲ’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.

ಹಫ್‌ಪೋಸ್ಟ್‌ ಹೇಳುತ್ತಿರುವುದೇನು...

* ಆಧಾರ್ ನೋಂದಣಿ ಮಾಡಲು ಖಾಸಗಿ ಸಂಸ್ಥೆಗಳಿಗೂ ಪರವಾನಿಗಿ ನೀಡಿದ್ದಾಗ ಬಳಕೆಯಾಗುತ್ತಿದ್ದ ತಂತ್ರಾಂಶಕ್ಕೆಂದು ಈ ಸೆಕ್ಯುರಿಟಿ ಪ್ಯಾಚ್ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗ ಬಳಕೆಯಲ್ಲಿರುವ ಆಧಾರ್ ನೋಂದಣಿ ತಂತ್ರಾಂಶದಲ್ಲೂ ಈ ಪ್ಯಾಚ್‌ ಅನ್ನು ಬಳಸಬಹುದು

* ಈ ಸೆಕ್ಯುರಿಟಿ ಪ್ಯಾಚ್ ಈಗಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕ ಇವನ್ನು ಕೇವಲ ₹ 2,500ಕ್ಕೆ ಮಾರಾಟ ಮಾಡಲಾಗುತ್ತಿದೆ

* ಆಧಾರ್ ನೋಂದಣಿ ವ್ಯವಸ್ಥೆಗೆ ಲಾಗಿನ್ ಆಗುವ ಸಂದರ್ಭದಲ್ಲಿ ಆಪರೇಟರ್‌ಗಳು ತಮ್ಮ ಯೂಸರ್‌ನೇಮ್, ಪಾಸ್‌ವರ್ಡ್ ಮತ್ತು ಬೆರಳಚ್ಚನ್ನು ನೀಡಬೇಕು. ಆದರೆ ಈ ಸೆಕ್ಯುರಿಟಿ ಪ್ಯಾಚ್‌ ಅಳವಡಿಸಿದ್ದರೆ ಲಾಗಿನ್ ಸಂದರ್ಭದಲ್ಲಿ ಬೆರಳಚ್ಚನ್ನು ಕೇಳುವುದೇ ಇಲ್ಲ. ಕೇವಲ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಬಳಸಿ ನೋಂದಣಿ ವ್ಯವಸ್ಥೆಗೆ ಲಾಗಿನ್ ಆಗಬಹುದು. ಒಬ್ಬ ಆಪರೇಟರ್‌ನ ಯೂಸರ್‌ನೇಮ್‌ ಬಳಸಿಕೊಂಡು ಹಲವು ಕಂಪ್ಯೂಟರ್‌ಗಳಲ್ಲಿ ಲಾಗಿನ್ ಆಗಬಹುದು

* ಆಧಾರ್ ನೋಂದಣಿಗೆ ಬಳಸುವ ಪ್ರತಿ ಕಂಪ್ಯೂಟರ್‌ನಲ್ಲೂ ಜಿಪಿಎಸ್ ಇರುತ್ತದೆ. ಆ ಕಂಪ್ಯೂಟರ್‌ ಎಲ್ಲಿಯದು ಎಂಬುದು ಆಧಾರ್ ಸರ್ವರ್‌ಗೆ ತಿಳಿದಿರುತ್ತದೆ. ಆದರೆ ಈ ಸೆಕ್ಯುರಿಟಿ ಪ್ಯಾಚ್‌ ಅಳವಡಿಸಿದರೆ ಜಿಪಿಎಸ್‌ ಇಲ್ಲದೆಯೂ ಕಂಪ್ಯೂಟರ್‌ ಅನ್ನು ಆಧಾರ್ ನೋಂದಣಿಗೆ ಬಳಸಬಹುದು

* ಆಧಾರ್ ಸರ್ವರ್‌ನಲ್ಲಿ ಇರುವ ದತ್ತಾಂಶಗಳನ್ನು ಕದಿಯಲು ಈ ಸೆಕ್ಯುರಿಟಿ ಪ್ಯಾಚ್ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಯುಐಡಿಎಐ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಆಧಾರ್‌ ಸಂಖ್ಯೆಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ದೇಶದಾದ್ಯಂತ ಸಾವಿರಾರು ಆಪರೇಟರ್‌ಗಳು ಇದನ್ನು ಬಳಸುತ್ತಿದ್ದಾರೆ. ಆ ಮೂಲಕ ಅಕ್ರಮವಾಗಿ ಲಕ್ಷಾಂತರ ಆಧಾರ್‌ ಸಂಖ್ಯೆಗಳನ್ನು ಸೃಷ್ಟಿಸಲಾಗಿದೆ

ಪ್ರಮುಖ ಸುದ್ದಿಗಳು