ತೈಲ ದರ– ಪ್ರಧಾನಿ ಏಕೆ ಮೌನ: ರಾಹುಲ್‌ ಪ್ರಶ್ನೆ

ನವದೆಹಲಿ: ತೈಲ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟಿನಂತಹ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲಿವೆ ಎಂದು ಅವರು ಹೇಳಿದ್ದಾರೆ. 

‘ದೇಶದ ಜನರು, ಯುವ ಜನರು ಏನನ್ನು ಆಲಿಸಲು ಬಯಸುತ್ತಾರೆಯೋ ಅದನ್ನು ಪ್ರಧಾನಿ ಮಾತನಾಡುತ್ತಿಲ್ಲ. ಅವರು ಯಾವ ಲೋಕದಲ್ಲಿ ಇದ್ದಾರೆಯೋ ಗೊತ್ತಿಲ್ಲ. ಅವರು ಭಾಷಣ ಮಾಡುತ್ತಲೇ ಇರುತ್ತಾರೆ. ಅವರನ್ನು ನೋಡಿ ನೋಡಿ ದೇಶಕ್ಕೆ ಸಾಕಾಗಿದೆ’ ಎಂದು ರಾಹುಲ್‌ ಹೇಳಿದರು. 

‘ವಿರೋಧ ಪಕ್ಷಗಳೆಲ್ಲ ಒಂದಾಗಿರುವುದು ಸಂತಸದ ಸಂಗತಿ. ನಮ್ಮ ಸಿದ್ಧಾಂತ ಒಂದು ಮತ್ತು ಎಲ್ಲರೂ ಜತೆಯಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಅವರು ಹೇಳಿದರು. ವಿರೋಧ ಪಕ್ಷಗಳ ಮುಖಂಡರ ಜತೆಗೆ ಮಹಾತ್ಮ ಗಾಂಧಿ ಸಮಾಧಿಯ ಸಮೀಪ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಹಿರಿಯ ಮುಖಂಡ ಶರದ್‌ ಯಾದವ್‌, ಜೆಡಿಎಸ್‌ ಮುಖಂಡ ಡ್ಯಾನಿಷ್‌ ಅಲಿ ಜತೆಗಿದ್ದರು.

ಇದಕ್ಕೂ ಮೊದಲು ಮಹಾತ್ಮ ಗಾಂಧಿ ಸಮಾಧಿಗೆ ಅವರು ನಮನ ಸಲ್ಲಿಸಿದರು. ಮಾನಸ ಸರೋವರದಿಂದ ತಂದಿದ್ದ ನೀರನ್ನು ಅವರು ಸಮಾಧಿಗೆ ಅರ್ಪಿಸಿದರು. ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ರಾಹುಲ್‌ ಭಾನುವಾರ ರಾತ್ರಿ ದೆಹಲಿಗೆ ಹಿಂದಿರುಗಿದ್ದರು. 

ರಾಮಲೀಲಾ ಮೈದಾನದ ಸಮೀಪದ ಪೆಟ್ರೋಲ್‌ ಪಂಪ್‌ವರೆಗೆ ಮೆರವಣಿಗೆ ನಡೆಸಿದ ಮುಖಂಡರು, ಪಂಪ್‌ ಮುಂದೆ ಧರಣಿ ನಡೆಸಿದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌, ಆನಂದ್‌ ಶರ್ಮಾ, ಅಹ್ಮದ್‌ ಪಟೇಲ್‌, ಜೈರಾಮ್‌ ರಮೇಶ್‌, ಎಎಪಿಯ ಸಂಜಯ ಸಿಂಗ್‌ ಮುಂತಾದ
ವರು ಧರಣಿಯಲ್ಲಿ ಭಾಗವಹಿಸಿದ್ದರು. 

ವಿರೋಧ ಪಕ್ಷಗಳಿಗೆ ಯಾವುದೇ ಸಿದ್ಧಾಂತ ಇಲ್ಲ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಾಗಿಯೇ ಈ ಪಕ್ಷಗಳು ಒಟ್ಟಾಗಿವೆ ಎಂದು ಭಾನುವಾರ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮೋದಿ ಹೇಳಿದ್ದರು. ವಿರೋಧ ಪಕ್ಷಗಳೆಲ್ಲ ಒಂದೇ ಸಿದ್ಧಾಂತ ಹೊಂದಿವೆ ಎಂದು ಹೇಳುವ ಮೂಲಕ ಮೋದಿ ಹೇಳಿಕೆಗೆ ರಾಹುಲ್‌ ತಿರುಗೇಟು ನೀಡಿದ್ದಾರೆ. 

ಕಿತ್ತೊಗೆಯಲು ಸಕಾಲ ಎಂದ ಸಿಂಗ್‌: ಮೋದಿ ನೇತೃತ್ವದ ಸರ್ಕಾರ ಎಲ್ಲ ಎಲ್ಲೆಗಳನ್ನೂ ಮೀರಿದೆ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಮಯ ಬಂದಿದೆ. ಈ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಆದರೆ ಅದು ಯಾವುದೂ ರಾಷ್ಟ್ರೀಯ ಹಿತಾಸಕ್ತಿಯಿಂದ ಮಾಡಿದ ಕೆಲಸ ಅಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಈ ಸರ್ಕಾರ ದಯನೀಯವಾಗಿ ವಿಫಲವಾಗಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲ ಪಕ್ಷಗಳು ಒಟ್ಟಾಗಬೇಕಿದೆ ಎಂದು ಅವರು ಕರೆ ಕೊಟ್ಟರು. 

‘ಮಗುವಿನ ಸಾವಿಗೆ ಹೊಣೆ ಯಾರು?’

‘ಬಿಹಾರದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದವರು ಆಂಬುಲೆನ್ಸ್‌ ತಡೆದಿದ್ದರಿಂದಾಗಿ ಅದರಲ್ಲಿದ್ದ ಮೂರು ವರ್ಷದ ಮಗು ಮೃತಪಟ್ಟಿದೆ. ಸಕಾಲಕ್ಕೆ ವೈದ್ಯಕೀಯ ನೆರವು ಸಿಗದಿರುವುದೇ ಈ ಸಾವಿಗೆ ಕಾರಣ. ಈ ಸಾವಿನ ಹೊಣೆಯನ್ನು ರಾಹುಲ್‌ ಗಾಂಧಿ ಹೊತ್ತುಕೊಳ್ಳುತ್ತಾರೆಯೇ’ ಎಂದು ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಹಿಂಸೆಯ ನರ್ತನ ಹಾಗೂ ಸಾವಿನ ಆಟವನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಜನರಿಗೆ ಹಿಂಸೆ: ಬಿಜೆಪಿ ಆರೋಪ

ಬಂದ್‌ ಕರೆಯನ್ನು ಜನರು ಬೆಂಬಲಿಸದ ಕಾರಣ ವಿರೋಧ ಪಕ್ಷಗಳು ಹಿಂಸೆಗೆ ಇಳಿದಿವೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಆರೋ‍ಪಿಸಿದ್ದಾರೆ.

2014ರ ಮೇಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತೈಲ ದರ ಇಳಿಯಿತು. ಅದಕ್ಕೂ ಮೊದಲು ದರ ಏರುತ್ತಲೇ ಇತ್ತು. ತೈಲ ಬೆಲೆಯ ಏರಿಕೆಗೆ ಕೇಂದ್ರ ಸರ್ಕಾರದ ಕೈಯಲ್ಲಿ ಪರಿಹಾರ ಇಲ್ಲ. ಸಮಸ್ಯೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಜನರ ಜತೆ ನಿಲ್ಲುತ್ತದೆ. ತೈಲ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸಲಿದೆ ಎಂದು ಅವರು ಹೇಳಿದರು.

ಸರ್ಕಾರದ ನಿಲುವು ಜನರಿಗೆ ಅರ್ಥವಾಗಿದೆ. ಹಾಗಾಗಿಯೇ, ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಕರೆ ಕೊಟ್ಟಿರುವ ಬಂದ್‌ಗೆ ಜನರು ಸ್ಪಂದಿಸಿಲ್ಲ ಎಂದು ಅವರು ಹೇಳಿದರು.

ಜನರ ಅಭಿವೃದ್ಧಿಯ ಹಲವು ಯೋಜನೆಗಳಿಗೆ ಸರ್ಕಾರವು ಭಾರಿ ಮೊತ್ತವನ್ನು ವ್ಯಯ ಮಾಡುತ್ತಿದೆ ಎಂಬುದನ್ನು ಪ್ರಸಾದ್‌ ವಿವರಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆಯಿಂದ ಬರುವ ಹಣವನ್ನು ಜನಪರ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆಹಾರ ಸಹಾಯಧನವಾಗಿ ಸರ್ಕಾರವು ₹1.62 ಲಕ್ಷ ಕೋಟಿ ನೀಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬಡಜನರಿಗಾಗಿ ಒಂದು ಕೋಟಿಗೂ ಹೆಚ್ಚು ಮನೆ ನಿರ್ಮಿಸಿ ನೀಡಲಾಗಿದೆ ಎಂದು ಅವರು ಹೇಳಿದರು.

ತೈಲದ ಮೇಲಿನ ಎಕ್ಸೈಸ್‌ ಸುಂಕವನ್ನು ಕೇಂದ್ರ ಸರ್ಕಾರ ಕಡಿತ ಮಾಡಲಿದೆಯೇ ಎಂಬ ಪ್ರಶ್ನೆಗೆ, ಕಳೆದ ವರ್ಷ ಕಡಿತ ಮಾಡಲಾಗಿದೆ ಎಂದು ಉತ್ತರಿಸಿದರು. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ರಾಜ್ಯಗಳು ಕಡಿತ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಆದರೆ, ಈ ನಿರ್ಧಾರ ರಾಜ್ಯಗಳಿಗೆ ಬಿಟ್ಟ ವಿಚಾರ. ಯಾಕೆಂದರೆ ರಾಜ್ಯಗಳು ಕೂಡ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಣ ವೆಚ್ಚ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಯುಪಿಎ ಆಳ್ವಿಕೆಯ ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಬರುವಂತೆ ಪ್ರಸಾದ್‌ ಅವರು ಸವಾಲೆಸೆದಿದ್ದಾರೆ.


***
70 ವರ್ಷಗಳಲ್ಲಿ ಆಗದ್ದು ತಮ್ಮ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಆಗಿದೆ ಎಂದು ಮೋದಿ ಹೇಳಿದ್ದು ನಿಜ. ದ್ವೇಷವನ್ನು ಹರಡಲಾಗುತ್ತಿದೆ. ದೇಶವನ್ನು ವಿಭಜಿಸಲಾಗಿದೆ

ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

 

ಪ್ರಮುಖ ಸುದ್ದಿಗಳು