ದಸರ ಹಾಗೂ ಚಳಿಗಾಲದ ಪ್ರವಾಸಕ್ಕೆ ಇಲ್ಲಿವೆ ವಿಶೇಷ ಪ್ಯಾಕೇಜ್‌ಗಳು

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಖಾಸಗಿ ಟೂರಿಸಂ ಕಂಪೆನಿಗಳಿಗೆ ಸಮರ್ಪಕ ಪೈಪೋಟಿ ನೀಡುತ್ತಿರುವ ರೈಲ್ವೆ ಇಲಾಖೆಯ ಅಂಗ ಸಂಸ್ಥೆ ‘ಭಾರತೀಯ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್’ (IRCTC) ದಸರಾ ಉತ್ಸವ ಮತ್ತು ಚಳಿಗಾಲದ ರಜಾದಿನಗಳ ವಿಶೇಷ ಪ್ರವಾಸ ಯೋಜನೆಗಳನ್ನು ಆಯೋಜಿಸಿದೆ.

ಸೆಪ್ಟೆಂಬರ್‌ನಿಂದ ನವೆಂಬರ್‌ ಅಂತ್ಯದವರೆಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸದ ಆಕರ್ಷಕ ಪ್ಯಾಕೇಜ್‌ಗಳನ್ನು ಪ್ರಕಟಿಸಿರುವ ಐಆರ್‌ಸಿಟಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ.

ದೇಶದ ವಿವಿಧೆಡೆಯ ಧಾರ್ಮಿಕ, ಐತಿಹಾಸಿಕ ಪ್ರವಾಸಿ ತಾಣಗಳ ಜತೆಗೆ ಪ್ರಕೃತಿಯ ರಮಣೀಯ ದೃಶ್ಯಗಳಿರುವ ತಾಣಗಳು, ಪರ್ವತ, ನದಿ, ಸಮುದ್ರ ತೀರ ಪ್ರದೇಶಗಳಲ್ಲಿನ ಸೌಂದರ್ಯವನ್ನು ಸವಿಯುವ ವಿಶೇಷ ಪ್ಯಾಕೇಜ್‌ಗಳನ್ನು ಇದು ಘೋಷಿಸಿದೆ. ದೇಶೀಯ ಮತ್ತು ವಿದೇಶಿಯ ಪ್ರವಾಸ ಕೈಗೊಳ್ಳುವ ಆಸಕ್ತರಿಗೆ ಅಷ್ಟಾಗಿ ಹೊರೆಯಾಗದಂತೆ, ಅಚ್ಚುಕಟ್ಟಾಗಿ ಪ್ರವಾಸದ ಯೋಜನೆಗಳನ್ನು ಇದು ರೂಪಿಸಿದೆ. ಜತೆಗೆ ರೈಲು ಗಾಡಿ ಪ್ರವಾಸದ ಪ್ಯಾಕೇಜ್‌ ಕೂಡ ಇದೆ.

ಪ್ರವಾಸಿ ರೈಲು (ಭಾರತ್‌ ದರ್ಶನ್‌): ಇದು ಅತ್ಯಂತ ಕಡಿಮೆ ದರದ ಪ್ರವಾಸದ ಪ್ಯಾಕೇಜ್‌ ಆಗಿದ್ದು, ಕೇಂದ್ರ ಸರ್ಕಾರ ವಿಶೇಷ ನೆರವು ನೀಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದ ಜನರಿಗೆ ಉತ್ತರ ಭಾರತದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗೆ ಈ ಪ್ಯಾಕೇಜ್‌ ಅವಕಾಶ ಒದಗಿಸುತ್ತದೆ.

‘ಭಾರತ್‌ ದರ್ಶನ್‌’ ಪ್ರವಾಸ ಇದೇ 15ರಿಂದ ಇದೇ 25ರವರೆಗೂ ನಿಗದಿಯಾಗಿದೆ. ಇದು 10 ರಾತ್ರಿ ಮತ್ತು 11 ದಿನಗಳ ಪ್ರವಾಸದ ಪ್ಯಾಕೇಜ್‌ ಆಗಿದ್ದು, ‘ತ್ರಿಮೂರ್ತಿ ದರ್ಶನ್‌’ ಎಂದೇ ಹೆಸರಾಗಿದೆ. ಮಧ್ಯ ಪ್ರದೇಶದ ಮಹಾಕಾಲೇಶ್ವರ, ಓಂಕಾರೇಶ್ವರ, ರಾಜಸ್ಥಾನದ ಜೈಪುರ, ಪುಷ್ಕರ್‌, ಮಹಾರಾಷ್ಟ್ರದ ತ್ರಯಂಬಕೇಶ್ವರ, ಶಿರಡಿ, ಪಂಢರಪುರ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಇದೇ 15ರಿಂದ ಈ ಪ್ರವಾಸಕ್ಕೆ ಚಾಲನೆ ಸಿಗಲಿದ್ದು, ಹುಬ್ಬಳ್ಳಿ ಮಾರ್ಗವಾಗಿ ರೈಲು ಚಲಿಸಲಿದೆ.

ಒಟ್ಟು 10 ರಾತ್ರಿಗಳಲ್ಲಿ 6 ರಾತ್ರಿಗಳನ್ನು ಪ್ರವಾಸಿಗರು ರೈಲಿನಲ್ಲಿ ಕಳೆದರೆ ಉಳಿದ ನಾಲ್ಕು ರಾತ್ರಿ ವಿಶ್ರಾಂತಿ ಪಡೆಯಲು ಹೋಟೆಲ್‌ಗಳಲ್ಲಿ ಐಆರ್‌ಸಿಟಿಸಿ ವ್ಯವಸ್ಥೆ ಮಾಡುತ್ತದೆ. ಒಟ್ಟಾರೆ ಈ ಪ್ರವಾಸದಲ್ಲಿ ಸುಮಾರು 3,500 ಕಿ.ಮೀ ಕ್ರಯಿಸಿದಂತಾಗುತ್ತದೆ ಎನ್ನುತ್ತಾರೆ ಐಆರ್‌ಸಿಟಿಸಿ ಬೆಂಗಳೂರು ಕಚೇರಿ ಮೇಲ್ವಿಚಾರಕ ಮೊಹಮ್ಮದ್‌.

ದಕ್ಷಿಣ ಭಾರತದ ಪ್ರವಾಸಿಗರಿಗಾಗಿ ರೈಲ್ವೆ ಇಲಾಖೆ ಈ ವಿಶೇಷ ಪ್ರವಾಸ ಯೋಜನೆಯನ್ನು ಎಂಟು ವರ್ಷದ ಹಿಂದೆ ಆರಂಭಿಸಿದೆ. ಆದರೆ ಕರ್ನಾಟಕದ ಮೂಲಕ ಈ ರೈಲು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಮಾತ್ರ ಚಲಿಸುತ್ತದೆ. ಅಂದರೆ ಪ್ರತಿ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಮಾತ್ರ ರಾಜ್ಯದ ರೈಲ್ವೆ ಮಾರ್ಗವಾಗಿ ಇದು ಚಲಿಸುತ್ತದೆ. ಉಳಿದ ಅವಧಿಯಲ್ಲಿ ದಕ್ಷಿಣ ಭಾರತದ ಇತರ ರಾಜ್ಯಗಳ ಮೂಲಕ ಈ ರೈಲು ಸಂಚರಿಸುತ್ತದೆ ಎಂದು ಅವರು ಮಾಹಿತಿ ನೀಡುತ್ತಾರೆ.

ಈ ಪ್ಯಾಕೇಜ್‌ನ ದರ ಒಬ್ಬರಿಗೆ ₹ 10,820. ಈ ಸ್ಥಳಗಳನ್ನು ವೈಯಕ್ತಿಕವಾಗಿ ನೋಡಲು ಹೋಗುವುದಾದರೆ ಇನ್ನೂ ಹೆಚ್ಚು ಖರ್ಚಾಗುತ್ತದೆ. ಕೇಂದ್ರ ಸರ್ಕಾರದ ವಿಶೇಷ ನೆರವಿನ ಯೋಜನೆ ಇದಾಗಿದ್ದು, ಐಆರ್‌ಸಿಟಿಸಿ ಹೆಚ್ಚು ಮುತುವರ್ಜಿಯಿಂದ ನಿಭಾಯಿಸುತ್ತಿದೆ ಎನ್ನುತ್ತಾರೆ ಅವರು.

ದೇಶೀಯ ‘ಏರ್‌ ಪ್ಯಾಕೇಜ್‌’: ಐಆರ್‌ಸಿಟಿಸಿ ರೈಲ್ವೆ ಪ್ರವಾಸದ ಪ್ಯಾಕೇಜ್‌ಗಳ ಜತೆಗೆ ದೇಶೀಯವಾಗಿ ‘ಏರ್‌ ಪ್ಯಾಕೇಜ್‌’ಗಳನ್ನು ಇದೇ ಸಂದರ್ಭದಲ್ಲಿ ಘೋಷಿಸಿದೆ. ಅದರಲ್ಲಿ ಪ್ರಮುಖವಾಗಿ ಇದೇ 28ರಿಂದ 30ರವರೆಗೆ ‘ಶಿರಡಿ– ನಾಸಿಕ್‌– ಶನಿ ಶಿಗ್ನಾಪುರ’ (ಎರಡು ರಾತ್ರಿ/ 3 ದಿನಗಳು) ಪ್ಯಾಕೇಜ್‌ ಒಳಗೊಂಡಿದೆ. ಇದರ ದರ ಒಬ್ಬರಿಗೆ ₹ 10,200.

ಅಕ್ಟೋಬರ್‌ 16ರಿಂದ 24ರವರೆಗೆ ‘ಚಂಡೀಗಡ– ಶಿಮ್ಲಾ, ಮನಾಲಿ–ಧರ್ಮಶಾಲಾ– ಅಮೃತಸರ’ (8 ರಾತ್ರಿ/9 ದಿನಗಳು) ಏರ್‌ ಪ್ಯಾಕೇಜ್‌ ಇದ್ದು, ಇದರ ದರ ತಲಾ ₹ 37,400.

ನವೆಂಬರ್ 6ರಿಂದ 11ರವರೆಗೆ ‘ಅಂಡಮಾನ್‌– ಹ್ಯಾವ್ಲಾಕ್‌– ಎಲಿಫೆಂಟಾ ಬೀಚ್‌– ನೀಲ್‌ ದ್ವೀಪ– ಪೋರ್ಟ್‌ಬ್ಲೇರ್‌– ಕೋರಲ್‌ ದ್ವೀಪ’ (5 ರಾತ್ರಿ/6 ದಿನಗಳು) ಪ್ಯಾಕೇಜ್‌ಗೆ ತಲಾ ₹41,250 ದರ ನಿಗದಿ ಮಾಡಿದೆ.

ಪ್ರವಾಸಿಗರಿಗೆ ವಿಮಾನದಲ್ಲಿ ಎಕಾನಮಿ ವರ್ಗದಲ್ಲಿ ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ‘ತ್ರೀ ಸ್ಟಾರ್‌’ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಭೋಜನದ ವ್ಯವಸ್ಥೆಯಿರುತ್ತದೆ. ಖಾಸಗಿ ಎ.ಸಿ ವಾಹನ, ಪ್ರಯಾಣ ವಿಮೆ, ಪ್ರವಾಸಿ ತಾಣದ ವೀಕ್ಷಣೆ ಮತ್ತು ಎಲ್ಲ ತೆರಿಗೆಗಳನ್ನು ಪ್ಯಾಕೇಜ್‌ ಒಳಗೊಂಡಿರುತ್ತದೆ.

ಇವುಗಳ ಜತೆಗೆ ಐಆರ್‌ಸಿಟಿಸಿ ರಜಾಕಾಲದ ಪ್ಯಾಕೇಜ್, ಹೋಟೆಲ್‌ಗಳು, ಕ್ಯಾಬ್‌ಗಳು (ಬಾಡಿಗೆ ಮೋಟಾರು ಗಾಡಿ), ಪ್ರವಾಸಿಗರಿಗೆ ರೈಲು ಗಾಡಿಯನ್ನು ಆನ್‌ಲೈನ್‌ ಮೂಲಕ ಕಾದಿರಿಸುವ ವ್ಯವಸ್ಥೆಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗೆ: 9731647952/ 9741429437

 

ಪ್ರಮುಖ ಸುದ್ದಿಗಳು