ನಿಮ್ಮ ಫೋನ್‌ ಟ್ಯಾಪಿಂಗ್‌ಗೆ ಗುರಿಯಾಗಿದೆ? ಇದನ್ನು ಓದಿ

ಬಹುತೇಕ ಮೊಬೈಲ್‌ಫೋನ್ ಬಳಕೆದಾರರಿಗೆ ಫೋನ್ ಟ್ಯಾಪಿಂಗ್ ಭಯ ಕಾಡುತ್ತಿರುತ್ತದೆ. ಇದರಿಂದ ಮೊಬೈಲ್‌ಫೋನ್‌ನಲ್ಲಿರುವ ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಬ್ಯಾಂಕ್‌ ಖಾತೆಯ ವಿವರಗಳಿಗೆ ಸುಲಭವಾಗಿ ಕನ್ನ ಹಾಕಬಹುದು. ಫೋನ್ ಟ್ಯಾಪಿಂಗ್ ಮಾಡುವುದಕ್ಕೆ ಹಲವು ದಾರಿಗಳಿವೆ. ಇದಕ್ಕೆ ನೆರವಾಗುವ ಟ್ರ್ಯಾಕ್‌ವ್ಯೂನಂತಹ ಕಿರು ತಂತ್ರಾಶಗಳೂ ಸಾಕಷ್ಟಿವೆ. ಹಾಗಾದರೆ ನಿಮ್ಮ ಮೊಬೈಲ್‌ಫೋನ್‌ ಟ್ಯಾಪಿಂಗ್‌ಗೆ ಗುರಿಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.

ಮೊಬೈಲ್‌ನಿಂದ ವಿಚಿತ್ರ ಶಬ್ದಗಳು ಬರುತ್ತಿವೆಯೇ?

ಫೋನ್‌ನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ವಿಚಿತ್ರ ಶಬ್ದಗಳು ಕೇಳಿಸುತ್ತಿದ್ದರೆ ನಿಮ್ಮ ಫೋನ್ ಟ್ಯಾಪಿಂಗ್‌ಗೆ ಗುರಿಯಾಗಿದೆ ಎಂದು ಶಂಕಿಸಬಹುದು. ಕೆಲವೊಮ್ಮೆ ನೆಟ್‌ವರ್ಕ್‌ ಸಮಸ್ಯೆಯಿಂದಲೂ ಈ ರೀತಿ ಶಬ್ದಗಳು ಕೇಳಿಸ
ಬಹುದು. ಮಾತನಾಡದೇ ಇರುವ ಸಂದರ್ಭದಲ್ಲೂ ಬೀಪ್‌ ಸೌಂಡ್ಸ್, ಕ್ಲಿಕ್ ಸೌಂಡ್ಸ್ ಬರುತ್ತಿದ್ದರೆ, ನಿಮ್ಮ ಫೋನ್ ಟ್ಯಾಪಿಂಗ್‌ಗೆ ಗುರಿಯಾಗಿರುವ ಸಾಧ್ಯತೆ ಇರುತ್ತದೆ. ನಿಖರವಾಗಿ ತಿಳಿಯಬೇಕೆಂದರೆ, ‘ಸೌಂಡ್‌ ಬ್ಯಾಂಡ್ ವಿಡ್ತ್ ಸೆನ್ಸರ್‌’ ಎಂಬ ಸಾಧನವನ್ನು ಮೊಬೈಲ್‌ ಬಳಿ ಇಟ್ಟರೆ, ಅಲರಾಂ ಸದ್ದಾಗುತ್ತದೆ. ಒಂದೇ ನಿಮಿಷದಲ್ಲಿ ಹಲವು ಬಾರಿ ಅಲರಾಂ ಸದ್ದಾದರೆ ಟ್ಯಾಪಿಂಗ್‌ಗೆ ಗುರಿಯಾಗಿದೆ ಎಂದರ್ಥ.

ಬ್ಯಾಟರಿ ಬಾಳಿಕೆ ಪರಿಶೀಲಿಸಿ

ಫೋನ್ ಚಾರ್ಜಿಂಗ್ ಬ್ಯಾಟರಿ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಒಮ್ಮೆಗೇ ಬ್ಯಾಟರಿ ಸಾಮರ್ಥ್ಯ ಕುಸಿದರೆ ನಿಮ್ಮ ಮೊಬೈಲ್‌ಫೋನ್ ಟ್ಯಾಪಿಂಗ್‌ಗೆ ಗುರಿಯಾಗಿರಬಹುದು. ನಮಗೆ ಅರಿವಿಲ್ಲದೆಯೇ ಬ್ಯಾಕ್‌ಗ್ರೌಂಡ್‌ನಲ್ಲಿ ಟ್ಯಾಪಿಂಗ್ ತಂತ್ರಾಂಶ ಕ್ರಿಯಾ
ಶೀಲವಾಗಿದ್ದರೆ, ಬ್ಯಾಟರಿ ಸಾಮರ್ಥ್ಯ ಕುಸಿಯುತ್ತದೆ ಎಂದರ್ಥ. ಇಂತಹ ಸಂದರ್ಭಗಳಲ್ಲಿ ಎಷ್ಟು ಹೊತ್ತು ಚಾರ್ಜ್‌ ಮಾಡಿದ್ದೇವೆ, ಮಾತನಾಡಿದ್ದೇವೆ, ನೆಟ್‌ ಬಳಸಿದ್ದೇವೆ ಎಂಬುದನ್ನು ಪರಿಶೀಲಿಸಿ.

ಸ್ವಿಚ್‌ ಆಫ್ ಮಾಡಿ ನೋಡಿ

ನಿಮ್ಮ ಫೋನ್‌ ಮೊದಲಿನಷ್ಟು ಸಮರ್ಥವಾಗಿ ಕ್ರಿಯಾಶೀಲವಾಗಿಲ್ಲದಿದ್ದರೆ, ಸ್ವಿಚ್‌ ಆಫ್‌ ಮಾಡಿದ ಕೂಡಲೇ ಷಟ್‌ಡೌನ್‌ ಆಗದಿದ್ದರೆ, ಲೈಟ್ ಇಂಡಿಕೇಟರ್ ಬೆಳಗುತ್ತಲೇ ಇದ್ದರೆ, ಫೋನ್‌ ಟ್ಯಾಪಿಂಗ್ ಆಗಿದೆ ಎಂದರ್ಥ. ಇಂತಹ ಸಮಸ್ಯೆಗಳಿದ್ದರೆ, ಫೋನ್ ಅನ್ನು ಹೊಸದಾಗಿ ರಿಬೂಟ್ ಮಾಡುವುದು ಒಳ್ಳೆಯದು. ಒಮ್ಮೆಮ್ಮೊ ಹೊಸ ತಂತ್ರಾಂಶಗಳನ್ನು ಅಳವಡಿಸಿಕೊಂಡಾಗ, ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿದಾಗಲೂ ಈ ರೀತಿ ಆಗಬಹುದು.

ತಾನಾಗಿಯೇ ಆನ್‌/ಆಫ್‌ ಆಗುತ್ತಿದೆಯೇ?

ನಿಮ್ಮ  ಹಸ್ತಕ್ಷೇಪ ಇಲ್ಲದೇ ನಿಮ್ಮ ಮೊಬೈಲ್‌ ಸ್ವಿಚ್‌ಆಫ್‌/ಸ್ವಿಚ್‌ಆನ್ ಆಗುತ್ತಿದ್ದರೆ, ಆ್ಯಪ್‌ಗಳು ಇನ್‌ಸ್ಟಾಲ್ ಆಗುತ್ತಿದ್ದರೆ, ನಿಮ್ಮ ಫೋನ್‌ ಹ್ಯಾಕಿಂಗ್‌ಗೆ ಗುರಿಯಾಗಿದೆ ಎಂದರ್ಥ.

ಇಂತಹ ತಂತ್ರಾಂಶಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯುವುದು ಸುಲಭ. ನಿಮಗೆ ಇಂತಹ ಅನುಮಾನಗಳು ಬಂದರೆ, ಕೂಡಲೇ ಅಲರ್ಟ್ ಸೌಲಭ್ಯವನ್ನು ಆ್ಯಕ್ಟಿವೇಟ್ ಮಾಡಿ. ಇದರಿಂದ ಎಂತಹ ತಂತ್ರಾಂಶಗಳು ಮೊಬೈಲ್‌ಗೆ ಸೇರಿದರೂ ಕೂಡಲೇ ಇ–ಮೇಲ್‌ಗೆ ಸಂದೇಶ ಬರುತ್ತದೆ. ಅಪರಿಚಿತ ವ್ಯಕ್ತಿಗಳಿಂದ ಎನ್‌ಕೋಡೆಡ್ ಸಂದೇಶಗಳು ಬರುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕಾರಣ ಇಂತಹ ಸಂದೇಶಗಳ ಮೂಲಕ ಕುತಂತ್ರಾಂಶಗಳನ್ನು ಕಳುಹಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.

ಹೀಗೂ ತಿಳಿಯಬಹುದು

ನೀವು ಗಮನಿಸಿರಬಹುದು. ಮಾತನಾಡುತ್ತಿರುವಾಗ ಟಿವಿ, ಕಂಪ್ಯೂಟರ್, ರೇಡಿಯೊ, ಲ್ಯಾಪ್‌ಟಾಪ್‌ಗಳ ಬಳಿ ನಿಮ್ಮ ಮೊಬೈಲ್‌ಫೋನ್‌ ಇಟ್ಟರೆ, ಒಂದು ರೀತಿ ಝುಮ್ಮೆನ್ನುವ ಶಬ್ದ ಕೇಳಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಇಂತಹ ಶಬ್ದಗಳು ಕೇಳಿಸುವುದಿಲ್ಲ. ಫೋನ್‌ ಬಳಸದೇ ಇರುವ ಸಂದರ್ಭಗಳಲ್ಲೂ ಇಂತಹ ಶಬ್ದಗಳು ಕೇಳಿಸುತ್ತಿದ್ದರೆ, ನಿಮ್ಮ ಮೊಬೈಲ್‌ಫೋನ್ ಟ್ಯಾಪಿಂಗ್ ಗುರಿಯಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಫೋನ್ ಬಿಲ್‌ ಪರಿಶೀಲಿಸಿ

ಪೋಸ್ಟ್‌ಪೇಯ್ಡ್ ಸಿಮ್‌ ಬಳಸುತ್ತಿರುವವರು ಸಾಮಾನ್ಯವಾಗಿ ತಿಂಗಳಿಗೊಮ್ಮೆ, ಬಿಲ್‌ ಪಾವತಿ ಮಾಡುತ್ತಾರೆ. ಯಾವುದಾದರೂ ಒಂದು ತಿಂಗಳು ಹೆಚ್ಚು ಬಿಲ್ ಬಂದರೆ, ಕೂಡಲೇ ವಿವರಗಳನ್ನು ತಿಳಿಯಿರಿ. ಎಷ್ಟು ಹೊತ್ತು ಕರೆ ಮಾಡಿದ್ದೇವೆ. ಎಷ್ಟು ಪ್ರಮಾಣದ ಡೇಟಾ ಬಳಸಿದ್ದೇವೆ ಎಂಬುದನ್ನು ಪರಿಶೀಲಿಸಿ. ಕನ್ನಹಾಕುವವರು ಕುತಂತ್ರಾಂಶಗಳನ್ನು ಫೋನ್‌ನೊಳಗೆ ಕಳುಹಿಸಿ, ನಮ್ಮ ಟ್ಯಾರಿಫ್ ಪ್ಲ್ಯಾನ್‌ಗಳನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ.  ನಮಗೆ ಗೊತ್ತಿಲ್ಲದೆಯೇ ಯಾವುದಾದರೂ ತಂತ್ರಾಂಶವನ್ನು ಅಳವಡಿಸಿದ್ದರೆ, ಅದು ಹೆಚ್ಚು ಡೇಟಾ ಬಳಸುತ್ತಿದ್ದರೆ ಮೊಬೈಲ್‌ಫೋನ್ ಟ್ಯಾಪಿಂಗ್‌ಗೆ ಗುರಿಯಾಗಿದೆ ಎಂದು ನಿರ್ಧರಿಸಬಹುದು. 

***

ಆ್ಯಪ್‌ಗಳನ್ನು ಅಳವಡಿಸುವ ಮುನ್ನ ಎಚ್ಚರ

ಬಹುತೇಕ ಕುತಂತ್ರಾಂಶಗಳು ಆ್ಯಪ್‌ಗಳ ಮೂಲಕವೇ ಫೋನ್‌ಗಳನ್ನು ಪ್ರವೇಶಿಸುತ್ತವೆ. ಹೀಗಾಗಿ ಪ್ಲೇಸ್ಟೋರ್ ಅಥವಾ ಆ್ಯಪ್‌ಸ್ಟೋರ್ಸ್‌ನಿಂದ ಕಿರು ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಮುನ್ನ ಎಚ್ಚರಿಕೆಯಿರಲಿ. ಯಾವುದೇ ತಂತ್ರಾಶಗಳಿರಲಿ, ಅವುಗಳಲ್ಲಿ ಸ್ಪೈವೇರ್‌ಗೆ ಸಂಬಂಧಿಸಿದ ಲಕ್ಷಣಗಳು ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡ ನಂತರವಷ್ಟೇ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಸಂತೋಷದ ವಿಷಯವೆಂದರೆ ಪ್ಲೇಸ್ಟೋರ್ ಅಥವಾ ಆ್ಯಪ್‌ಸ್ಟೋರ್‌ಗಳಲ್ಲಿರುವ ಬಹುತೇಕ ಕಿರು ತಂತ್ರಾಂಶಗಳು ಸ್ಕ್ರೀನಿಂಗ್ (ಪರಿಶೀಲನೆ) ಆಗಿರುತ್ತವೆ. ಆದರೂ, ಕೆಲವು ಕುತಂತ್ರಾಂಶಗಳು ಪ್ಲೇಸ್ಟೋರ್‌ನ ಕಣ್ಣು ತಪ್ಪಿಸಿ ಹೊಕ್ಕುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಗೇಮಿಂಗ್ ಆ್ಯಪ್‌ಗಳ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಇವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮುನ್ನ ಕಾಲ್‌ ಹಿಸ್ಟರಿ, ಅಡ್ರೆಸ್‌ಬುಕ್‌, ಕಾಂಟ್ಯಾಕ್ಟ್ ಲಿಸ್ಟ್‌ಗಳ ಮಾಹಿತಿ ಮಡೆಯಲು ಅನುಮತಿ ಕೇಳಿದರೆ ಯೋಚಿಸಬೇಕು.

ಕೆಲವೊಮ್ಮೇ ಚೀಟಿಂಗ್ ಆ್ಯಪ್‌ಗಳ ಲಾಂಛನಗಳು ನಮಗೆ ಹೆಚ್ಚು ಪರಿಚಯವಿರುವ ಆ್ಯಪ್‌ಗಳ ಲಾಂಛನಗಳನ್ನೇ ಹೋಲುತ್ತವೆ. ಹೀಗಾಗಿ ಡೌನ್‌ಲೋಡ್‌ ಮಾಡುವ ಮುನ್ನ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವವರ ಹೆಸರುಗಳನ್ನು ಪರಿಶೀಲಿಸಬೇಕು. ನಮ್ಮ ಮೊಬೈಲ್‌ಗಳನ್ನು ಮಕ್ಕಳೂ ಬಳಸುತ್ತಿದ್ದರೆ, ಅಪಾಯಕಾರಿ ಕಿರು ತಂತ್ರಾಂಶಗಳನ್ನು ಡೌನ್‌ಲೋಡ್  ಮಾಡಿಕೊಳ್ಳದ ಹಾಗೆ ‘ಪೇರೆಂಟಲ್ ಆ್ಯಕ್ಸೆಸ್‌’ ಅಳವಡಿಸಿಕೊಳ್ಳಬೇಕು.

ಪ್ರಮುಖ ಸುದ್ದಿಗಳು