ಸ್ಮಾರ್ಟ್‌ಫೋನ್‌ ಸಾಮರ್ಥ್ಯ: ಹೀಗೊಂದು ಪರೀಕ್ಷೆ

ಸ್ಮಾರ್ಟ್‌ಫೋನ್‌ಗಳು ನೀರು, ದೂಳಿನ ಸಂಪರ್ಕಕ್ಕೆ ಬಂದರೂ ಸಹ ಅವುಗಳ ಸಾಮರ್ಥ್ಯಕ್ಕೆ ಹಾನಿ ಆಗುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಬಹುತೇಕ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಐಪಿ ಪರೀಕ್ಷೆಯ ಫಲಿತಾಂಶ ಉಲ್ಲೇಖಿಸುತ್ತವೆ. 

ಐಪಿ ಎಂದರೆ ಇಂಗ್ರೆಸ್ ಪ್ರೊಟೆಕ್ಷನ್. ಲ್ಯಾಟಿನ್ ಮೂಲದ ಇಂಗ್ರೆಸ್ ಪದದ ಅರ್ಥ ‘ಪ್ರವೇಶಿಸುವುದು’. ನೀರಿನ ಅಂಶ ಒಳಗೆ ಸೇರಿದರೂ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿದೆ ಎನ್ನುವುದನ್ನು ತೋರಿಸಲು ಈ ಐಪಿ ಮಾನದಂಡ ಬಳಸಲಾಗುತ್ತದೆ. ಈ ಐಪಿ ಮಾನದಂಡದ ವ್ಯಾಖ್ಯಾನ ಏನು, ಹೇಗೆ ಎನ್ನುವ ಮಾಹಿತಿ ತಿಳಿದಿದ್ದರೆ ಉತ್ತಮ.

ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಸಾಮರ್ಥ್ಯವನ್ನು ಐಪಿ ಪರೀಕ್ಷೆ ಫಲಿತಾಂಶ, ಅಂತರರಾಷ್ಟ್ರೀಯ ಎಲೆಕ್ಟ್ರೊಟೆಕ್ನಿಕಲ್ ಕಮಿಷನ್‌ನ ‘60529’ ಮಾನದಂಡದ ಅಡಿ ಪಟ್ಟಿ ಮಾಡುತ್ತವೆ.

ಈಚೆಗಿನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ ಸರಣಿಗಳ ಕುರಿತು ಸ್ಯಾಮ್ಸಂಗ್ ‘ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಐಪಿ68’ ಹೊಂದಿದೆ ಎಂದು ಹೇಳಿಕೊಂಡಿದೆ. ಗ್ಯಾಲಕ್ಸಿ ಎಸ್7 ಹಾಗೂ ನಂತರದ ಸರಣಿಯ ಸ್ಮಾರ್ಟ್‌ಫೋನ್‌ಗಳು ‘ದೂಳು, ಮರಳಿನ ಕಣಗಳಿಂದ ಆಗುವ ಹಾನಿ ತಡೆಯುವ ಸಾಮರ್ಥ್ಯ ಹೊಂದಿದೆ. 1.5 ಮೀ ಆಳದ ನೀರಿನಲ್ಲಿ 30 ನಿಮಿಷಗಳ ತನಕ ಇದ್ದರೂ ಸುರಕ್ಷಿತವಾಗಿರುತ್ತದೆ’ ಎಂದು ಕಂಪನಿ ಪ್ರಚಾರ ಮಾಡಿದೆ. ಅಂದರೆ ಒಂದು ವೇಳೆ ಈ ಫೋನ್‌ಗಳು ಶೌಚಾಲಯದ ಗುಂಡಿಗೆ ಬಿದ್ದರೂ ಸುರಕ್ಷಿತವಾಗಿರಬೇಕು ಎಂದು ತಿಳಿಯಬಹುದು. 

ಐಪಿ ಮಾನದಂಡದಲ್ಲಿ ಉಲ್ಲೇಖಿಸಿರುವ ಸಂಖ್ಯೆಗಳ ಅರ್ಥವೇನು ಎನ್ನುವ ಮಾಹಿತಿ ಮುಖ್ಯವಾಗುತ್ತದೆ. ಸ್ಮಾರ್ಟ್‌ಫೋನ್‌ ಎಷ್ಟರಮಟ್ಟಿಗೆ ದೂಳಿನಿಂದ ಸುರಕ್ಷಿತವಾಗಿದೆ ಎನ್ನುವುದನ್ನು ಮೊದಲನೆಯ ಅಂಕಿಯಿಂದ ಅಳೆಯಲಾಗುತ್ತದೆ. ಮೊದಲನೆ ಸ್ಥಾನದಲ್ಲಿ ‘0’ ಇದ್ದರೆ ಆ ಸ್ಮಾರ್ಟ್‌ಫೋನ್‌ ದೂಳಿನಿಂದ ಸುರಕ್ಷಿತವಾಗಿಲ್ಲ ಎಂದರ್ಥ. ಅದೇ ಸ್ಥಾನದಲ್ಲಿ ‘6’ ಇದ್ದರೆ ಆ ಸ್ಮಾರ್ಟ್‌ಫೋನ್ 2ರಿಂದ 8 ತಾಸುಗಳವರೆಗೂ ದೂಳಿನಿಂದ ಸುರಕ್ಷಿತವಾಗಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು. 

ಸ್ಮಾರ್ಟ್‌ಫೋನ್ ನೀರಿನಿಂದ ಯಾವ ಮಟ್ಟಿಗೆ ಸುರಕ್ಷಿತವಾಗಿದೆ ಎಂದು ಎರಡನೇ ಸ್ಥಾನದಲ್ಲಿರುವ ಸಂಖ್ಯೆಯಿಂದ ತಿಳಿಯಬಹುದು. ಇದನ್ನು ಸೊನ್ನೆಯಿಂದ 9ನೇ ಅಂಕಿ ರೇಟಿಂಗ್‌ನಲ್ಲಿ ತನಕ ಅಳೆಯಲಾಗುತ್ತದೆ. ಎರಡನೇ ಸ್ಥಾನದಲ್ಲಿ ‘8’ ಇದ್ದರೆ ಆ ಫೋನ್ ದೀರ್ಘಕಾಲದವರೆಗೆ ನೀರಿನಲ್ಲಿ ಮುಳುಗಿದ್ದರೂ ಹಾನಿಯಾಗುವುದಿಲ್ಲ ಎಂದರ್ಥ. ‘9’ ಇದ್ದರೆ, ಬೃಹತ್ ಜೆಟ್‌ಗಳಿಂದ ಹೊರಹೊಮ್ಮುವ ನೀರಿನ ತೀವ್ರತೆ ತಡೆಯುವಷ್ಟು ಆ ಫೋನ್ ಬಲಿಷ್ಠವಾಗಿವೆ ಎಂದು.

ಆ್ಯಪಲ್‌ನ ಐಫೋನ್ 7 ಹಾಗೂ ನಂತರದ ಸರಣಿಯ ಫೋನ್‌ಗಳು ಐಪಿ 67 ರೇಟಿಂಗ್ ಹೊಂದಿದೆ. ಆದರೆ ‘ನೀರು, ದೂಳು ತಡೆಯುವ ಸಾಮರ್ಥ್ಯ ಶಾಶ್ವತವಲ್ಲ. ಸದಾ ನೀರು, ದೂಳಿನ ಸಂಪರ್ಕಕ್ಕೆ ಬಂದಲ್ಲಿ ಈ ಸಾಮರ್ಥ್ಯ ಕಡಿಮೆ ಆಗುತ್ತಾ ಬರಬಹುದು. ನೀರಿನಿಂದ ಆಗುವ ಹಾನಿ ವಾರಂಟಿ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂದು ಕಂಪನಿ ಎಚ್ಚರಿಕೆ ನೀಡುತ್ತದೆ. ಈಜು ಅಥವಾ ಯಾವುದೇ ರೀತಿಯ ನೀರಾಟಗಳನ್ನು ಆಡುವಾಗ, ಹಬೆಯಿಂದ ಕೂಡಿದ ಸ್ನಾನದ ಕೋಣೆಯಲ್ಲಿ ಇರುವಾಗ ಐಫೋನ್ ಬಳಸದಂತೆಯೂ ಕಂಪನಿ ಸಲಹೆ ನೀಡುತ್ತದೆ. ಗೂಗಲ್ ಸಹ ತನ್ನ ಪಿಕ್ಸೆಲ್2 ಫೋನ್ ಬಳಕೆದಾರರಿಗೆ ಇಂತಹದೇ ಸಲಹೆ ನೀಡಿದೆ.

ಕೆಲವು ಸ್ಮಾರ್ಟ್‌ಫೋನ್‌ಗಳ ಜಾಹೀರಾತುಗಳಲ್ಲಿ ‘ವಾಟರ್ ಪ್ರೂಫ್’ (ನೀರಿನಿಂದ ಸುರಕ್ಷಿತ) ಎಂದು ತೋರಿಸಿದರೂ ಸಹ ‘ವಾಟರ್ ರೆಸಿಸ್ಟೆಂಟ್’ (ನೀರು ನಿರೋಧಕ) ಪದ ಹೆಚ್ಚು ಸೂಕ್ತ. ಹೆಚ್ಚು ಐಪಿ ರೇಟಿಂಗ್ ಇರುವ ಫೋನ್‌ಗಳಾದರೂ ಸರಿಯೇ, ಒಂದು ವೇಳೆ ನೀವು ನೀರಿನಲ್ಲಿದ್ದಾಗಲೂ ಅವುಗಳನ್ನು ಬಳಸಲೇಬೇಕೆಂದರೆ ಪ್ಲಾಸ್ಟಿಕ್ ಬ್ಯಾಗ್ ಅಥವಾ ನೀರು ನಿರೋಧಕ ಫೋನ್ ಕವರ್‌ಗಳಲ್ಲಿ ಇರಿಸಿಕೊಳ್ಳುವುದು ಉತ್ತಮ.

ಪ್ರಮುಖ ಸುದ್ದಿಗಳು