ಮ್ಯೂಚ್ಯುವಲ್ ಫಂಡ್‌ನಲ್ಲಿ ಹಣ ತೊಡಗಿಸುವುದು ಸರಿಯೇ?

ಅಮಿತ್  ನಾಸರೆ, ಬೆಂಗಳೂರು

–ಸಾಫ್ಟ್‌ವೇರ್‌ ತಂತ್ರಜ್ಞ.  ಮಾಸಿಕ ಆದಾಯ ₹ 75,000. ವಯಸ್ಸು 35. ನನಗೆ 5 ವರ್ಷದ ಹೆಣ್ಣು ಮಗಳು ಇದ್ದಾಳೆ. ನಾನು ₹ 45 ಲಕ್ಷ ಸಾಲ ಮಾಡಿ, 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಕೊಂಡು
ಕೊಂಡಿದ್ದೇನೆ. ಮ್ಯೂಚುವಲ್ ಫಂಡ್‌ನ SIPನಲ್ಲಿ ಹಣ ಹೂಡುವ ವಿಧಾನ ತಿಳಿಸಿ. ವಾರ್ಷಿಕ ₹ 35,000 ಹಣ ಸುಕನ್ಯಾ ಯೋಜನೆಯಲ್ಲಿ ಹಾಗೂ ₹ 20,000 ಪಿ.ಪಿ.ಎಫ್.ನಲ್ಲಿ ತೊಡಗಿಸಿದ್ದೇನೆ. ನಾನು ಗೃಹ ಸಾಲ ಆದಷ್ಟು ಬೇಗ ತೀರಿಸಬೇಕೆಂದಿದ್ದೇನೆ?

ಉತ್ತರ: ನಿಮ್ಮ ಉಳಿತಾಯದ ಯೋಜನೆಗಳು ಚೆನ್ನಾಗಿವೆ. ಅವುಗಳನ್ನು ಮಧ್ಯದಲ್ಲಿ ನಿಲ್ಲಿಸಬೇಡಿ. ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಪಿ‍.‍ಪಿ.ಎಫ್. ದೀರ್ಘಾವಧಿ ಉಳಿತಾಯ ಯೋಜನೆಗಳಾಗಿದ್ದು ತೆರಿಗೆ ಉಳಿಸಲು ಕೂಡಾ ಅನುಕೂಲವಾಗುತ್ತದೆ. ವ್ಯವಸ್ಥಿತ ಹೂಡಿಕೆ ಯೋಜನೆ (sip) ಒಂದು ಪ್ರತೀ ತಿಂಗಳು ಹಣ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಯೋಜನೆ. ನಷ್ಟ ಅನುಭವಿಸುವ ಸಂದರ್ಭ ಕಡಿಮೆ. ಪ್ರಾರಂಭದಲ್ಲಿ ₹ 2000–5,000 ‘ಸಿಪ್’ ಪ್ರಾರಂಭಿಸಿ. ಈ ಖಾತೆ ಹೊಂದಲು ನೀವು ಬಯಸುವ ಯಾವುದೇ ಮ್ಯೂಚುವಲ್ ಫಂಡ್ ಕಂ‍ಪನಿಗಳು ಅಥವಾ ಏಜೆಂಟರು ನಿಮಗೆ ಸಲಹೆ ನೀಡುತ್ತಾರೆ. ನೀವು ನಿರ್ಧರಿಸಿದ ಮೊತ್ತ ಪ್ರತೀ ತಿಂಗಳೂ ನಿಮ್ಮ ಬ್ಯಾಂಕ್ ಖಾತೆಯಿಂದ ಮ್ಯೂಚುವಲ್‌ ಫಂಡ್‌ಗೆ ವರ್ಗಾವಣೆ ಆಗುತ್ತಿರುತ್ತದೆ. ಇನ್ನು ನಿಮ್ಮ ಗೃಹ ಸಾಲ ಮುಂಚಿತವಾಗಿ ತೀರಿಸುವ ಯೋಜನೆ ವಿಚಾರ ಈಗ ಸದ್ಯಕ್ಕೆ ಬೇಡ. ಗೃಹ ಸಾಲದ ಕಂತು ಬಡ್ಡಿಯಿಂದ ತೆರಿಗೆ ಉಳಿಸಬಹುದಾದ್ದರಿಂದ, ಇಂತಹ ಸಾಲ ಅವಧಿಗೆ ಮುನ್ನ ತೀರಿಸುವುದು ಜಾಣತನವಲ್ಲ.

ಜಿ.ಎಸ್. ನಾಗಭೂಷಣ್, ಮಧುಗಿರಿ

–ಖಾಸಗಿ ಅನುದಾನಿತ B.ED ಕಾಲೇಜಿನಲ್ಲಿ Librarian ಆಗಿ ಕೆಲಸ ಮಾಡುತ್ತೇನೆ. ನನ್ನ ತಿಂಗಳ ಸಂಬಳ ₹ 65,410. ವಾರ್ಷಿಕ ವಿಮಾ ಕಂತು ₹ 2.25 ಲಕ್ಷ. ₹ 5,000 ಆರ್.ಡಿ. ಇದೆ. ನಿವೇಶನ ಮತ್ತು ಮನೆ ಖರೀದಿ ಉದ್ದೇಶದ ಸಾಲ ಮಾಡಿ ಮನೆ ಕಟ್ಟಿಸಬೇಕೆಂದಿದ್ದೇನೆ. ನನಗೆ Synd ಆರೋಗ್ಯ ಪಾಲಿಸಿ ಇದೆ. ಯಾವುದೇ ಸಾಲ ಇಲ್ಲ. ಮನೆ ಬಾಡಿಗೆ ₹ 5,000. ಎಲ್ಲಾ ಖರ್ಚು ಕಳೆದು ತಿಂಗಳಿಗೆ ₹ 30,000 ಉಳಿಕೆ ಇದೆ. ಪಿಂಚಣಿ ಸೌಲತ್ತು ಇಲ್ಲ. ಒಳ್ಳೆ ಪಿಂಚಣಿ ಯೋಜನೆ ತಿಳಿಸಿ.

ಉತ್ತರ: ನಿಮ್ಮ ಉಳಿತಾಯದಲ್ಲಿ ಗರಿಷ್ಠ ಭಾಗ ವಿಮೆಗೆ ಮೀಸಲಾಗಿಟ್ಟಿದ್ದೀರಿ. ನೀವು ಮನೆ ಕಟ್ಟುವುದಾದಲ್ಲಿ LIC- Houseing ನಲ್ಲಿ ಸಾಲ ಪಡೆಯಿರಿ. ಇದರಿಂದ ಬಡ್ಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದು. ಜೊತೆಗೆ ಜೀವನದ ಸಂಜೆಯಲ್ಲಿ ಸ್ವಂತ ಮನೆ ಇದ್ದಂತಾಗುತ್ತದೆ. ಪಿಂಚಣಿ ವಿಚಾರದಲ್ಲಿ National Pension  Scheme ನಲ್ಲಿ ಹಣ ಹೂಡಿ. ಇದೊಂದು ಉತ್ತಮ ಪಿಂಚಣಿ ಯೋಜನೆ ಹಾಗೂ ಸೆಕ್ಷನ್ 80C ಹೊರತುಪಡಿಸಿ ವಾರ್ಷಿಕ ಗರಿಷ್ಠ ₹ 50,000  ಒಟ್ಟು ಆದಾಯದಿಂದ ಕಳೆದು (Sec 80CD (1B) ತೆರಿಗೆ ಸಲ್ಲಿಸುವ ಅವಕಾಶ ಕೂಡಾ ಇದೆ.

ಭಾಗ್ಯಮ್ಮ, ಊರುಬೇಡ

–ನಾನು ಜೂನ್ 2015 ರಿಂದ ಅಟಲ್ ಪಿಂಚಣಿ ಯೋಜನೆಯಲ್ಲಿ ಮುಂದೆ ನನಗೆ ಮಾಸಿಕ ಪಿಂಚಣಿ ₹ 5000 ಸಿಗಲು ಹಣ ಕಟ್ಟುತ್ತಿದ್ದೇನೆ. ಇದಕ್ಕೆ ಬಾಂಡ್ ರೂಪದಲ್ಲಿ ಯಾವುದೇ ದಾಖಲೆಗಳಿಲ್ಲ. ಕೇಳಿದರೆ ನೀವು ತಿಂಗಳಿಗೆ ₹ 1318 ಕಟ್ಟುವುದು ನಿಮ್ಮ ಖಾತೆಯ ಮುಖಾಂತರವಾದ್ದರಿಂದ ಅದೇ ದಾಖಲೆ ಎನ್ನುತ್ತಾರೆ ಎಲ್‌ಐಸಿಯವರು. ಈ ಬಗ್ಗೆ ಬಾಂಡು ಕೊಟ್ಟಿದ್ದರೆ ಅನುಕೂಲ
ವಾಗುತ್ತಿತ್ತು. ಶ್ರಮಪಟ್ಟು ಉಳಿಸಿದ ಹಣ, ಜೀವನದ ಸಂಜೆಯಲ್ಲಿ ಸಿಗದಿದ್ದರೆ ಎನ್ನುವ ಭಯ ಕಾಡುತ್ತಿದೆ. ಇನ್ನೊಂದು ಪ್ರಶ್ನೆ. ಗೆಳತಿಯ ಹತ್ತಿರ ₹ 2 ಲಕ್ಷವಿದೆ. ಅದನ್ನು ವೃದ್ಧ್ಯಾಪದಲ್ಲಿ ಬಳಸಲು ಎಲ್ಲಿ, ಯಾವ ಬ್ಯಾಂಕಿನಲ್ಲಿ ಇರಿಸಬೇಕು?

ಉತ್ತರ: ನೀವು ಅಟಲ್ ಪಿಂಚಣಿ ವಿಚಾರದಲ್ಲಿ ಸಂಶಯ ಅಥವಾ ಭಯ ಪಡುವ ಅವಶ್ಯವಿಲ್ಲ. ಇದು ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಯೋಜನೆ. ಇವರು LIC ಯಂತೆ ಪಾಲಿಸಿ ನೀಡದಿದ್ದರೂ ಹಣ ಕಡಿತವಾದುದು ನಿಮ್ಮ ಪಾಸ್‌ಬುಕ್‌ನಲ್ಲಿ ಇರುತ್ತದೆ. ನಿಮ್ಮ ಗೆಳತಿ, ಮನೆಗೆ ಸಮೀಪದ ಬ್ಯಾಂಕುಗಳಲ್ಲಿ ₹ 2 ಲಕ್ಷ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 10 ವರ್ಷಗಳ ಅವಧಿಗೆ ಠೇವಣಿ ಮಾಡಲಿ. ಇದರಿಂದ ಹಣ ಬೆಳೆದು ಅವರ ಜೀವನದ ಸಂಜೆಯಲ್ಲಿ ವಿನಿಯೋಗಿಸಲು ಅನುಕೂಲವಾಗುತ್ತದೆ. ನೀವು ಮಾಡಿದ ಅಟಲ್ ಪಿಂಚಣಿ ಯೋಜನೆ ಸರಿ ಇದೆ ಹಾಗೂ ಮಧ್ಯದಲ್ಲಿ ನಿಲ್ಲಿಸಬೇಡಿ.

ಹೆಸರು ಬೇಡ, ಹಾರೋಹಳ್ಳಿ

–ನಾನು ಜಲ ಮಂಡಳಿಯ ನಿವೃತ್ತ ನೌಕರ. ತಿಂಗಳ ಪಿಂಚಣಿ ₹ 2,800. ₹15 ಲಕ್ಷ ಬ್ಯಾಂಕ್ ಠೇವಣಿ ಮಾಡಿದ್ದೇನೆ. ಜೊತೆಗೆ ₹ 8000 ಆರ್.ಡಿ. ಮಾಡಿದ್ದೇನೆ. ತೆರಿಗೆ ವಿಚಾರದಲ್ಲಿ ತಿಳಿಸಿ.

ಉತ್ತರ: ನೀವು ಹಿರಿಯ ನಾಗರಿಕರಾಗಿರುವುದರಿಂದ ವಾರ್ಷಿಕವಾಗಿ ನಿಮ್ಮ ಪಿಂಚಣಿ ಹಾಗೂ ಉಳಿದ ಆದಾಯ ₹ 3 ಲಕ್ಷ ದಾಟಿದಲ್ಲಿ ನೀವು ತೆರಿಗೆಗೆ ಒಳಗಾಗುತ್ತೀರಿ. 1–4–2018 ರಿಂದ ₹ 3 ಲಕ್ಷ ಹೊರತುಪಡಿಸಿ ಸೆಕ್ಷನ್ 80TTB  ಆಧಾರದ ಮೇಲೆ ಬ್ಯಾಂಕ್ ಠೇವಣಿ ಬಡ್ಡಿಯಲ್ಲಿ ₹ 50,000 ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ ಪ್ರತ್ಯೇಕವಾಗಿ ₹ 40,000 ಕೂಡಾ ವಿನಾಯಿತಿ ಇದ್ದು, ನಿಮ್ಮ ವಾರ್ಷಿಕ ಆದಾಯ ₹ 3.90 ಲಕ್ಷ ದಾಟುವವರೆಗೆ ತೆರಿಗೆ ಇರುವುದಿಲ್ಲ.

ಹೆಸರು ಬೇಡ, ಊರು ದಾವಣಗೆರೆ

–ನಿರುದ್ಯೋಗಿ. ಹೆಂಡತಿ ಸರ್ಕಾರಿ ನೌಕರಿಯಲ್ಲಿದ್ದಾಳೆ. 10 ವರ್ಷ ಸೇವಾವಧಿ ಇದೆ. ಎಲ್ಲಾ ಕಡಿತದ ನಂತರ ₹ 22,000 ಬರುತ್ತದೆ. ಮಗ ಆರೋಗ್ಯ ಇಲಾಖೆಗೆ ಸೇರಿ ಒಂದು ವರ್ಷವಾಗಿದ್ದು,  ತಿಂಗಳಿಗೆ ಎಲ್ಲಾ ಕಡಿತದ ನಂತರ ₹ 14,500 ಬರುತ್ತದೆ. ಹೆಂಡತಿ ಹೆಸರಿನಲ್ಲಿ ಒಂದೂವರೆ ಗುಂಟೆ ರೆವಿನ್ಯೂ ನಿವೇಶನವಿದ್ದು, ಅಲ್ಲಿ ಮನೆಕಟ್ಟಬೇಕೆಂದಿದ್ದೇವೆ. ಗೃಹಸಾಲ ನೀಡಲು ಅನೇಕ ಬ್ಯಾಂಕುಗಳು ನಿರಾಕರಿಸಿವೆ. ಕೆಲವು ಖಾಸಗಿ ಬ್ಯಾಂಕುಗಳು 10 ವರ್ಷದ ಅವಧಿವರೆಗೆ, ₹ 16 ಲಕ್ಷ ಸಾಲಕ್ಕೆ ₹ 29,000 ರಂತೆ ಮಾಸಿಕ ಕಂತು ಕಟ್ಟಬೇಕಾಗುತ್ತದೆ ಎಂದಿದ್ದಾರೆ. ₹ 29000 ಕಂತು ತುಂಬಿ, ನನಗೆ ಜೀವನ ಸಾಗಿಸಲು ಸಾಧ್ಯವಿಲ್ಲ. ಜೊತೆಗೆ ಮಗಳು ಎಂಎಸ್ಸಿ (ಆಗ್ರಿಕಲ್ಚರ್) ಮಾಡುತ್ತಿದ್ದು ಅಲ್ಲಿ ಕೂಡಾ ಖರ್ಚು ಇದೆ. ಮನೆ ನಿರ್ಮಿಸಲು ಸಲಹೆ ನೀಡಿ.

ಉತ್ತರ: ಮೊದಲಿಗೆ ರೆವಿನ್ಯೂ ನಿವೇಶನದಲ್ಲಿ ಮನೆ ಕಟ್ಟಲು, ಹಳ್ಳಿ ಇರಲಿ, ದಿಲ್ಲಿ ಇರಲಿ ಸರ್ಕಾರ ಪರವಾನಿಗೆ ನೀಡುವುದಿಲ್ಲ. ಜೊತೆಗೆ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳು ಎಂದಿಗೂ ಸಾಲ ನೀಡುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಗೃಹಸಾಲ ಕೊಡುವ ಮುನ್ನ ವ್ಯಕ್ತಿಯ ಸಾಲ ಮರು ಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ನಿಮ್ಮ ರೆವಿನ್ಯೂ ನಿವೇಶನ ಮೊದಲು ಭೂ ಪರಿವರ್ತನೆ ಮಾಡಿಕೊಳ್ಳಿ. ಮನೆ ಕಟ್ಟುವ ನಿಮ್ಮ ಧ್ಯೇಯ ತುಂಬಾ ಚೆನ್ನಾಗಿದ್ದರೂ, ಮಗಳ ವಿದ್ಯಾಭ್ಯಾಸ, ಮದುವೆ ಇವೆರಡನ್ನೂ ಕಡೆಗಣಿಸುವಂತಿಲ್ಲ. ಸ್ವಲ್ಪ ತಾಳ್ಮೆಯಿಂದ ಇರಿ. ಮುಂದೆ ಎಲ್ಲವೂ ಸರಿ ಹೋಗಿ ನಿಮ್ಮ ಮಗ ಕೂಡಾ ಬಡ್ತಿ ಹೊಂದುತ್ತಾರೆ ಹಾಗೂ ಅಲ್ಪಸ್ವಲ್ಪ ಸಾಲ ಪಡೆದು ಮನೆ ಕಟ್ಟಿಸಿಕೊಳ್ಳಿ.  ಯಾವುದೇ ಕಾರಣಕ್ಕೂ ₹ 16 ಲಕ್ಷ ಸಾಲ ಪಡೆದು, 10 ವರ್ಷಗಳ ಅವಧಿಗೆ ತಿಂಗಳಿಗೆ ₹ 29 ಸಾವಿರದಂತೆ ಕಂತು ಮರು ಪಾವತಿಸಲು ಮುಂದಾಗಬೇಡಿ. ಇದರಿಂದ ಹಣಕಾಸಿನ ತೊಂದರೆ ಎದುರಾಗುತ್ತದೆ.

ಹೆಸರು ಬೇಡ, ಚಿಂತಾಮಣಿ

ಕೆಎಸ್ಆರ್‌ಟಿಸಿಯ ನಿವೃತ್ತ ನೌಕರ. ತಿಂಗಳ ಪಿಂಚಣಿ ₹ 2,155. ಚಿಂತಾಮಣಿಯಲ್ಲಿ 30X25 ಎರಡು ನಿವೇಶನಗಳು ಹಾಗೂ ಮನೆ ಮಾರಾಟ ಮಾಡಿದರೆ ₹ 50 ಲಕ್ಷ ಬರುತ್ತದೆ. ಈ ₹ 50 ಲಕ್ಷಕ್ಕೆ ತೆರಿಗೆ ಬರುವುದಾದರೆ, ತೆರಿಗೆ ಉಳಿಸಲು ಮಾರ್ಗ ತಿಳಿಸಿ.

ಉತ್ತರ: ನಿವೇಶನ ಹಾಗೂ ಮನೆ ಮಾರಾಟ ಮಾಡಿ ಬರುವ ಹಣಕ್ಕೆ ಬಂಡವಾಳ ವೃದ್ಧಿ ತೆರಿಗೆ ಬರುತ್ತದೆ. ಇದೇ ವೇಳೆ ಸೆಕ್ಷನ್ 54EC ಆಧಾರದ ಮೇಲೆ NHAI ಅಥವಾ REC  ಬಾಂಡುಗಳಲ್ಲಿ 5 ವರ್ಷಗಳ ಅವಧಿಗೆ ಗರಿಷ್ಠ ₹ 50 ಲಕ್ಷ ಹಣ ಹೂಡಿ, ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಪಡೆಯಬಹುದು. ಇವೆರಡೂ ಕೇಂದ್ರ ಸರ್ಕಾರದ ಅಂಗ ಸಂಸ್ಥೆಗಳಾಗಿವೆ. ಇಲ್ಲಿ ಹಣ ಹೂಡಲು ಭಯ ಪಡುವ ಅವಶ್ಯವಿಲ್ಲ. ಮೊದಲು ಗರಿಷ್ಠ ಅವಧಿ (Lock in Period) ಬರೇ ಮೂರು ವರ್ಷಗಳಾಗಿದ್ದು, ಇದನ್ನು 1–4–2018 ರಿಂದ 5 ವರ್ಷಗಳಿಗೆ ಏರಿಸಲಾಗಿದೆ. ಪ್ರಾಯಶಃ ನೀವು ಬಹಳ ಕಡಿಮೆ ಪಿಂಚಣಿ ಪಡೆಯುತ್ತಿದ್ದು, ನಿಮ್ಮ ಖರ್ಚು ನಿಭಾಯಿಸಲು ಈ ರೀತಿ ತೀರ್ಮಾನ ತೆಗೆದುಕೊಂಡಿರಬಹುದು. ಈ ದೊಡ್ಡ ಮೊತ್ತ ಕೈಸೇರುತ್ತಲೇ, ಹಣ ಕಾಪಾಡಿಕೊಂಡು ಬರುವುದು ಬಹಳ ಕಷ್ಟದ ಕೆಲಸ. ಇಂದು ನೀವು ಪಡೆಯುವ ಬೆಲೆ ನಿಜವಾಗಿ ಉತ್ತಮವೆಂದು ಕಂಡರೂ, ಸ್ಥಿರ ಆಸ್ತಿಯಿಂದ ಸದ್ಯ ಹೆಚ್ಚಿನ ವರಮಾನವಿದ್ದರೂ, ಮುಂದೆ ಇಂತಹ ಆಸ್ತಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಬಹಳ ಅಗತ್ಯವಿರುವಲ್ಲಿ ಒಂದು ನಿವೇಶನ ಮಾತ್ರ ಮಾರಾಟ ಮಾಡಿ.

ಚನ್ನಬಸವ, ಬೆಳಗಾವಿ

–ತಾಯಿಯ ವಯಸ್ಸು 52. ಸರ್ಕಾರಿ ಇಲಾಖೆಯಲ್ಲಿ ಕೆಲಸ. ಈವರೆಗೆ ₹ 2 ಲಕ್ಷ ಉಳಿಸಿ SBIನಲ್ಲಿ FD ಮಾಡಿರುತ್ತಾರೆ. ಇದು ಸರಿ ಇದೆಯೇ ಅಥವಾ ಮ್ಯೂಚ್ಯುವಲ್ ಫಂಡ್‌ನಲ್ಲಿ ತೊಡಗಿಸಬೇಕೇ?

ಉತ್ತರ: ನೀವು ಆರಿಸಿಕೊಂಡ ಹೂಡಿಕೆ ಹಾಗೂ ಬ್ಯಾಂಕು ಎರಡೂ ತುಂಬಾ ಚೆನ್ನಾಗಿವೆ. ನಿಮಗೆ ಕೆಲವರು ಮ್ಯೂಚುವಲ್ ಫಂಡ್ ಹೂಡಿಕೆ ಬ್ಯಾಂಕ್ ಠೇವಣಿಗಿಂತ ಹೆಚ್ಚಿನ ವರಮಾನ ತರುತ್ತದೆ ಎಂಬುದಾಗಿ ತಿಳಿಸಿರಬಹುದು. ಇದು ಸತ್ಯಕ್ಕೆ ದೂರವಾದ ವಿಚಾರವಲ್ಲ. ಆದರೆ, ಇಲ್ಲಿ ಹೆಚ್ಚಿನ ವರಮಾನ ಹಾಗೂ ಹೆಚ್ಚಿನ ನಷ್ಟ ಇವೆರಡೂ ಎದುರಾಗುವ ಸಾಧ್ಯತೆ ಇದೆ. ಉಳಿತಾಯದಲ್ಲಿ ಹಣದ ಭದ್ರತೆ ಹಾಗೂ ನಿಖರವಾದ ಆದಾಯ ಬಹುಮುಖ್ಯ. ನಿಮ್ಮೊಡನೆ ಬರೇ ₹ 2 ಲಕ್ಷ ಹಣವಿದ್ದು, ಕಂಟಕ ರಹಿತ ಹೂಡಿಕೆಯಾದ ಬ್ಯಾಂಕ್ ಠೇವಣಿ ನಿಮ್ಮನ್ನು ಕಾಯುತ್ತದೆ ಹಾಗೂ ಅಗತ್ಯ ಬಿದ್ದಾಗ ಅಸಲು ಹಾಗೂ ಬಡ್ಡಿ ಪಡೆಯಬಹುದು. ನಿಮ್ಮ ತಾಯಿಯ ಜೀವನದ ಸಂಜೆ ನೆಮ್ಮದಿಯಾಗಿರಲು, ಈಗ ಮಾಡಿದ ಹೂಡಿಕೆ ಎಂದಿಗೂ ಬದಲಾಯಿಸಬೇಡಿ.

ಎಂ.ಎಸ್. ವೀರಯ್ಯ, ದಾವಣಗೆರೆ

–ನಿವೃತ್ತ ಸರ್ಕಾರಿ ನೌಕರ. ನಿವೃತ್ತಿಯಿಂದ ಬಂದ ಹಣ ಮಗಳ ಮದುವೆಗೆಂದು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೇನೆ. ಪಿಂಚಣಿ ಮೊತ್ತದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪತ್ನಿಯ ಜಮೀನಿಗೆ ಸಂಬಂಧಿಸಿದ ಹಣ ₹ 5 ಲಕ್ಷ ಬಂದಿದೆ. ಈ ಹಣ ಅವಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿಯಾಗಿರಿಸಿದ್ದೇನೆ. ಈ ಹಣ ಮ್ಯೂಚ್ಯುವಲ್ ಫಂಡ್‌ನಲ್ಲಿ ಇರಿಸಲು ನಿಮ್ಮ ಅಭಿಪ್ರಾಯಬೇಕಾಗಿದೆ?

ಉತ್ತರ: ಇದುವರೆಗೆ ನೀವು ಮಾಡುತ್ತಿರುವ ಉಳಿತಾಯ ಹಾಗೂ ನಡೆದು ಬಂದ ದಾರಿ ತುಂಬಾ ಚೆನ್ನಾಗಿದೆ. ಅದನ್ನೆ ಮುಂದುವರೆಸಿರಿ. ಜಮೀನು ಮಾರಾಟ ಮಾಡಿರುವುದರಿಂದ ಹಣ ಬಂದಿರಬಹುದು, ಆದರೆ ಜಮೀನು ಕಳೆದು ಕೊಂಡಿದ್ದೀರಿ. ಇದೇ ರೀತಿ ಇಲ್ಲಿ ಬಂದ ಹಣ ಜೋಪಾನವಾಗಿ ಯಾವುದೇ ಕಂಟಕ–ಸಂಕಟವಿಲ್ಲದೇ ನಿವೃತ್ತಿಯ ನಂತರ ಜೀವನ ನಿರ್ವಹಿಸಲು ನಿಮಗೆ ಬ್ಯಾಂಕ್ ಠೇವಣಿಯೇ ಲೇಸು. ಹೆಚ್ಚಿನ ಬಡ್ಡಿ, ವರಮಾನ, ಉಡುಗೊರೆ, ಹಣ ದ್ವಿಗುಣ ಈ ಎಲ್ಲಾ ಆಮಿಷಗಳಿಗೆ ಬಲಿಯಾಗಬೇಡಿ.

ಹೆಸರು ಬೇಡ, ಬೆಂಗಳೂರು

–ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರು ಜೀವನ ಸಾಕಾಗಿದೆ. ನನ್ನ ಮೂಲ ಉತ್ತರ ಕನ್ನಡದ ಒಂದು ಹಳ್ಳಿ. ಊರ ಜಮೀನು ಪುರಸಭೆ (Muncipality) ಮಿತಿಯೊಳಗೆ ಬಂದು, ಅದನ್ನು ಮಾರಾಟ ಮಾಡಿ ಬೇರೊಂದು ಕೋಳಿಸಾಗಾಣಿಕೆ ಅಥವಾ ಪಶುಸಂಗೋಪನಾ ಕಾರ್ಯಕ್ರಮಕೈಗೊಳ್ಳಬೇಕೆಂದಿದ್ದೇನೆ. ಭೂಮಿ ಮಾರಾಟ ಮಾಡುವುದಕ್ಕೆ ತೆರಿಗೆ ಬರಬಹುದೇ?

ಉತ್ತರ: ಕೃಷಿ ಜಮೀನು ಮಾರಾಟ ಮಾಡಿದರೆ Capital Gain ಸೆಕ್ಷನ್ 48 ಆಧಾರದ ಮೇಲೆ ತೆರಿಗೆ ಸಂಪೂರ್ಣ ವಿನಾಯಿತಿ ಇದೆ. ಆದರೆ ಇಂತಹ ಕೃಷಿ ಜಮೀನು 8–10 ಕಿ.ಮೀ. ಪುರಸಭೆಯಿಂದ ಒಳಗಿರುವಲ್ಲಿ ಸೆಕ್ಷನ್ 2 (14) (3) (a) ಆಧಾರದ ಮೇಲೆ ತೆರಿಗೆಗೆ ಒಳಗಾಗುತ್ತದೆ. ತೆರಿಗೆ ಉಳಿಸಲು NHAI or REC ಬ್ಯಾಂಡುಗಳಲ್ಲಿ ಹಾಕಬಹುದಾದರೂ, ಇಲ್ಲಿ ಕನಿಷ್ಠ 5 ವರ್ಷ (lock in Priod) ಇರಿಸಬೇಕಾಗುತ್ತದೆ. ಇದರಿಂದ ನಿಮ್ಮ ಉದ್ದೇಶಿತ ವಿಚಾರ ಸಫಲವಾಗದು. Capital Gain ಕೊಡುವುದಾದರೆ ತೆರಿಗೆ ದರ ಶೇ 20 ಇರುತ್ತದೆ. ನೀವು ಕೈಕೊಳ್ಳುವ ಕೋಳಿ ಸಾಕಾಣಿಕೆ, ಪಶುಸಂಗೋಪನೆ, ವಿಚಾರದಲ್ಲಿ ನಿಮಗೆ ಏನಾದರೂ ಅನುಭವವಿದೆಯೇ ತಿಳಿಯಲಿಲ್ಲ. ಬೆಂಗಳೂರಿನಂತಹ ಪಟ್ಟಣದಲ್ಲಿ ವಾಸವಾಗಿ ಇಂತಹ ಉದ್ಯೋಗಕ್ಕೆ ಕೈಹಾಕುವಾಗ ಸ್ವಲ್ಪ ಜಾಗ್ರತೆ ಇರಲಿ. ಆದರೆ ಧೈರ್ಯ ಕೆಡುವುದು ಬೇಡ. ಶ್ರಮದಿಂದ ‍ಪ್ರತಿಫಲ ಪಡೆಯಿರಿ.

ಪ್ರಮುಖ ಸುದ್ದಿಗಳು