ವಿದ್ಯಾರ್ಥಿಗಳಿಗೆ ಲಾಕರ್‌ ಸೌಲಭ್ಯ ಒದಗಿಸಲು ಆಗದು: ಅನುದಾನ ರಹಿತ ಶಾಲೆಗಳ ಸಂಘಟನೆ

ಬೆಂಗಳೂರು: ‘ಪ್ರತಿ ಶಾಲೆಯಲ್ಲಿ ಮಕ್ಕಳಿಗಾಗಿ ಲಾಕರ್‌ ಸೌಲಭ್ಯ ಒದಗಿಸಬೇಕು ಎಂಬ ಅವೈಜ್ಞಾನಿಕ ನಿಯಮ ರೂಪಿಸುವ ಚಿಂತನೆಯನ್ನೂ ಶಿಕ್ಷಣ ಇಲಾಖೆಯು ಕೈಬಿಡಬೇಕು’ ಎಂದು ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಿಕ್ಷಕರು ನೀಡುವ ಹೋಂವರ್ಕ್‌ಅನ್ನು ಗಣನೀಯವಾಗಿ ಕಡಿಮೆ ಮಾಡುವುದರಿಂದ ವಿಷಯಗಳು ಮಕ್ಕಳಿಗೆ ಮನದಟ್ಟು ಆಗುವುದಿಲ್ಲ. ಆಯಾ ದಿನದ ಪಾಠಗಳನ್ನು ಮಕ್ಕಳು ಮನೆಗೆ ಹೋಗಿ ಮನನ ಮಾಡಿಕೊಂಡರೆ ಶೇ 80ರಷ್ಟು ವಿಷಯ ನೆನಪಿನಲ್ಲಿ ಉಳಿಯುತ್ತದೆ ಎಂದು ಅಧ್ಯಯನಗಳೇ ಹೇಳಿವೆ’ ಎಂದರು.

‘ಮಕ್ಕಳು ದೇಹ ತೂಕದ ಶೇ 15ರಷ್ಟು ಭಾರವನ್ನು ಹೊರಲು ಸಮರ್ಥರು. ಇಲಾಖೆಯು ದೇಹದ ತೂಕದ ಶೇ 8ರಷ್ಟು ಮಾತ್ರ ಬ್ಯಾಗ್‌ ಭಾರ ಇರಬೇಕು ಎನ್ನುತ್ತದೆ. ಇದು ಸರಿಯಾದ ನಿರ್ಧಾರವಲ್ಲ’ ಎಂದರು.

‘ಪ್ರತಿ ವಿದ್ಯಾರ್ಥಿಗೂ ಲಾಕರ್‌ ಸೌಲಭ್ಯ ನೀಡಲು ಇಲಾಖೆ ಶಿಫಾರಸ್ಸು ಮಾಡಿದೆ. ಒಂದು ಶಾಲೆಯಲ್ಲಿ ಸಾವಿರ ಮಕ್ಕಳು ಇದ್ದರೆ, ಅವರೆಲ್ಲರಿಗೂ ಲಾಕರ್ ಇಡಲೆಂದೇ ಪ್ರತ್ಯೇಕ ಕಟ್ಟಡ ಕಟ್ಟಬೇಕಾಗುತ್ತದೆ’ ಎಂದು ವ್ಯಂಗ್ಯವಾಡಿದರು. 

ಸಿಬಿಎಸ್‌ಸಿ ಪಠ್ಯದ ಶಾಲೆಗಳ ಒಕ್ಕೂಟದ ಸದಸ್ಯ ಡಾ.ಸುಪ್ರಿತ್‌, ‘ನಮ್ಮ ಶಿಕ್ಷಣ ಸಚಿವರು ಓಪನ್‌ ಬುಕ್‌ ಎಕ್ಸಾಂ ಬಗ್ಗೆ ಮಾತನಾಡುವ ಬದಲು, ಒಂದು ದೇಶ ಒಂದು ಪಠ್ಯ ಜಾರಿಗೆ ಚಿಂತನೆ ಮಾಡಲಿ’ ಎಂದರು.

ಪ್ರಮುಖ ಸುದ್ದಿಗಳು