ಮಧ್ಯಪ್ರದೇಶದ ವಿಧಾನಸಭೆ ‘ಶ್ರೀರಾಮ ರಾಜಕಾರಣ': ರಾಮರಥ ಏರಲಿದೆ ರಾಹುಲ್ ಕಾಂಗ್ರೆಸ್

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಮೆದು ಹಿಂದುತ್ವ ಅನುಸರಿಸಲಿರುವ ಕಾಂಗ್ರೆಸ್ ಪಕ್ಷ ಶ್ರೀರಾಮನಿಗೆ ಮೊರೆ ಹೋಗಲಿದೆ.

'ಶ್ರೀರಾಮ ರಾಜಕಾರಣ' ಇತ್ತೀಚಿನವರೆಗೆ ಬಿಜೆಪಿಯ ಏಕಸ್ವಾಮ್ಯ ಆಗಿತ್ತು. ರಾಮರಥ ಏರಿ ದೇಶವೆಲ್ಲ ಸಂಚರಿಸಿದ್ದ ಮಹಾರಥಿ ಎಲ್.ಕೆ.ಅಡ್ವಾಣಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಉತ್ತಮ ಫಸಲನ್ನು ಕಟಾವು ಮಾಡಿಕೊಟ್ಟಿದ್ದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಕೈಯಲ್ಲಿದ್ದ ಈ ವಿಷಯವನ್ನು ಈ ಬಾರಿ ಕಾಂಗ್ರೆಸ್ ಕಸಿದುಕೊಂಡಿದೆ. ರಾಮ ಕಾಡಿಗೆ ಹೋದ ದಾರಿಗಳನ್ನು (ರಾಮ ವನಗಮನ ಪಥ) ನಿರ್ಮಿಸಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ 2007ರಲ್ಲಿ ಘೋಷಣೆ ಮಾಡಿದ್ದರು. ಆದರೆ ಈ ಯೋಜನೆ ಈವರೆಗೂ ಪೂರ್ಣಗೊಂಡಿಲ್ಲ. ಈ ಕೆಲಸವನ್ನು ತಾನು ಪೂರ್ಣಗೊಳಿಸುವುದಾಗಿ ಕಾಂಗ್ರೆಸ್ ಪಕ್ಷ ಸಾರಿದೆ.

ಹಾಲಿ ಸಿದ್ಧವಾಗುತ್ತಿರುವ ಕಾಂಗ್ರೆಸ್ ಪಕ್ಷದ ರಾಮರಥ ಈ ಎಲ್ಲ ಮಾರ್ಗಗಳಲ್ಲಿ ಸಂಚರಿಸಲಿದೆ. ಚಿತ್ರಕೂಟದಿಂದ ಇದೇ 21ಕ್ಕೆ ಆರಂಭವಾಗಿ ಅಕ್ಟೊಬರ್ ಒಂಬತ್ತಕ್ಕೆ ಅಂತ್ಯಗೊಳ್ಳುವ ಈ ಯಾತ್ರೆಯಲ್ಲಿ ಸ್ಥಳೀಯ ಜನರನ್ನು ಪಾಲ್ಗೊಳ್ಳುವಂತೆ ಹುರಿದುಂಬಿಸಲಾಗುವುದು. ತೆರದ ರಥದಲ್ಲಿ ಹಿಂದೂ ಸಂತರು ಕುಳಿತುಕೊಳ್ಳಲಿದ್ದಾರೆ. ಅಖಂಡ ಮಾನಸಪಥ ಮತ್ತು ಭಜನೆಗಳನ್ನು ರಥದಿಂದ ಬಿತ್ತರಿಸಲಾಗುವುದು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ 23 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಗೋಶಾಲೆಯನ್ನು ತೆರೆಯುವುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮೊನ್ನೆಯಷ್ಟೇ ಘೋಷಿಸಿದ್ದರು. ಇದೀಗ ಕೈಲಾಸ ಮಾನಸ ಸರೋವರ ಯಾತ್ರೆ ಪೂರ್ಣಗೊಳಿಸಿ ಹಿಂದಿರುಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಶಿವಭಕ್ತಿ' ಪ್ರಕಟಿಸಿದ್ದಾರೆ. ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣಾ ಪ್ರಚಾರ ಅಭಿಯಾನವನ್ನು ರಾಹುಲ್, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಓಂಕಾರೇಶ್ವರದಿಂದ ಆರಂಭ ಮಾಡಲಿದ್ದಾರೆ. ಜ್ಯೋತಿರ್ಲಿಂಗ ದರ್ಶನ- ಪೂಜೆ ನೆರವೇರಿಸಲಿದ್ದಾರೆ. ಗುಜರಾತ್ ಮತ್ತು ಕರ್ನಾಟಕ ಚುನಾವಣೆಗಳಲ್ಲಿ ಅನುಸರಿಸಿದ ಮೆದು ಹಿಂದುತ್ವದ ನೀತಿಯನ್ನು ಮಧ್ಯಪ್ರದೇಶಕ್ಕೂ ವಿಸ್ತರಿಸಲಿದ್ದು, ದೇವಾಲಯಗಳಿಗೆ ದೌಡಾಯಿಸಲಿದ್ದಾರೆ. ನರ್ಮದಾ ನದಿ ನಿರ್ಮಿತ 'ಓಂ' (ದೇವನಾಗರಿ ಲಿಪಿ) ಆಕಾರದ ದ್ವೀಪ ಓಂಕಾರೇಶ್ವರ. ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದೆನಿಸಿದೆ.

ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ನಂತರವೇ ಆಯಾ ದಿನದ ಚುನಾವಣೆ ಪ್ರಚಾರ ನಡೆಸುವರು. ಪ್ರಚಾರಕ್ಕೆ ತೆರಳುವ ಸ್ಥಳದ ಪ್ರಸಿದ್ಧ ದೇವಾಲಯಕ್ಕೂ ಭೇಟಿ ನೀಡುವರು. ದಿಗ್ವಿಜಯಸಿಂಗ್ ಅವರು ಸತತ ಆರು ತಿಂಗಳ ಕಾಲ 3,800 ಕಿ.ಮೀ. ಉದ್ದದ ನರ್ಮದಾ ಪರಿಕ್ರಮವನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಳೆದ 2013ರ ಚುನಾವಣೆಗಳಲ್ಲಿ ಬಿಜೆಪಿ 165 ಸೀಟುಗಳನ್ನು ಗೆದ್ದಿತ್ತು. ಕಾಂಗ್ರೆಸ್ ಗೆಲುವು ಕೇವಲ 58 ಸ್ಥಾನಗಳಿಗೆ ಮೊಟಕಾಗಿತ್ತು.

ಅಲ್ಪಸಂಖ್ಯಾತರ ಜನಸಂಖ್ಯೆ ಕಡಿಮೆ ಇರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ರಾಮನ ಹೆಸರಿನಲ್ಲಿ ರಾಜಕಾರಣ ನಡೆಸಿದೆ ಎಂಬುದು ಪ್ರದೇಶ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಟೀಕೆ.

ಪ್ರಮುಖ ಸುದ್ದಿಗಳು