ಲಿಂಚಿಂಗ್‌ ತಡೆಯುವಷ್ಟು ಕಾನೂನು ಬಲವಾಗಿಲ್ಲ: ಸದ್ಗುರು ಜಗ್ಗಿ ವಾಸುದೇವ್‌

ಬೆಂಗಳೂರು: ‘ಗುಂಪು ದಾಳಿಗಳನ್ನು (ಲಿಂಚಿಂಗ್‌) ತಡೆಯುವಷ್ಟು ಕಾನೂನು–ಸುವ್ಯವಸ್ಥೆ ದೇಶದಲ್ಲಿ ಬಲವಾಗಿಲ್ಲ. ನಾವು ಮಕ್ಕಳ ನಾಪತ್ತೆ ಬಗ್ಗೆ ಚರ್ಚಿಸಿದಂತೆ ದನಕರುಗಳ ಕಳ್ಳತನತ ಬಗ್ಗೆಯೂ ಮಾತನಾಡಬೇಕಿದೆ...’

ಬೆಂಗಳೂರು ಪ್ರೆಸ್‌ ಕ್ಲಬ್‌ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡ ಈಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್‌ ತಮ್ಮತ್ತ ತೂರಿಬಂದ ಪ್ರಶ್ನೆಗಳ ಬಾಣಗಳನ್ನು ಇಂತಹ ಉತ್ತರಗಳಿಂದ‌ ನಯವಾಗಿಯೇ ಎದುರಿಸಿದರು. 

‘ದಶಕಗಳಿಂದಲೂ ಗುಂಪುದಾಳಿಗಳು(ಲಿಂಚಿಂಗ್) ನಡೆಯುತ್ತಿವೆ. ಮೊದಲು, ಈಗಿನಂತೆ ಮೊಬೈಲ್‌ ಕ್ಯಾಮೆರಾಗಳು ಇರಲಿಲ್ಲ. ಹಾಗಾಗಿ ಬೆಳಕಿಗೆ ಬರುತ್ತಿರಲಿಲ್ಲ. ನನ್ನ ಹರೆಯದ ದಿನಗಳಲ್ಲಿ ಮೈಸೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಮೂರು ಗುಂಪುದಾಳಿಗಳನ್ನು ಕಣ್ಣಾರೇ ಕಂಡಿದ್ದೇನೆ. ಐವತ್ತು–ನೂರು ಜನರಿಂದ ನಡೆಯುವ ಇಂತ ಕೃತ್ಯಗಳನ್ನು ಒಬ್ಬಿಬ್ಬರು ಪೊಲೀಸರು ತಡೆಯಲು ಸಾಧ್ಯವೇ? ಈ ದುಷ್ಕೃತ್ಯಗಳು ಅಂತ್ಯಗೊಳ್ಳಲು ಕಾನೂನು–ಸುವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಬೇಕಿದೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿವರ್ಷ 40 ಸಾವಿರ ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಆ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗೆಯೇ ವರ್ಷಂಪ್ರತಿ ಕೆಳವರ್ಗದ ಸಂಪತ್ತಾದ ಮೂರು ಲಕ್ಷ ದನಕರುಗಳು ಕಾಣೆಯಾಗುತ್ತಿವೆ. ಪಶುಗಳ ಕಳ್ಳಸಾಗಣೆಗಾರರಿಂದ ನೂರಕ್ಕೂ ಹೆಚ್ಚು ಪೊಲೀಸರು ಹತ್ಯೆಯಾಗುತ್ತಾರೆ. ದೇಶದ ಒಂದು ಬದಿಯ ಗಡಿಗೋಡೆ ಬಲಿಷ್ಠವಾಗಿದೆ. ಆದರೆ, ಬಾಂಗ್ಲಾದೇಶದ ಭಾಗದಲ್ಲಿ ಇದೇ ಸ್ಥಿತಿ ಇದೆ ಎಂದು ಹೇಳಲಾಗದು. ಪಶುಗಳ ಕಾಣೆಗೂ, ಬಾಂಗ್ಲಾ ಗಡಿಗೂ ಸಂಬಂಧವಿದೆ’ ಎಂದರು.

‘ರಾಮ ಪತ್ನಿಯನ್ನು ಕಾಡಿಗೆ ಕಳುಹಿಸಿದ, ಆತನನ್ನು ಆರಾಧಿಸಬಾರದು ಎಂದು ಕೆಲವು ಮಹಿಳೆಯರು ಹೇಳುತ್ತಾರೆ. ಸೀತೆಯ ಅಪಹರಣವಾದಾಗ ಆತ ಕಾಡಲ್ಲಿ ಅಲೆದಲೆದು ಹುಡುಕಿದ, ಸೈನ್ಯ ಕಟ್ಟಿದ, ಯುದ್ಧ ಮಾಡಿದ. ರಾಜನಾದ ಆತನಿಗೆ ಬೇಕಾದರೆ ಮತ್ತೊಬ್ಬ ಪತ್ನಿ ಸಿಗುತ್ತಿದ್ದರೂ ಬಯಸಲಿಲ್ಲ. ಆತ ರಾಜ್ಯದ ಹಿತಕ್ಕಾಗಿ ಪತ್ನಿ, ಮಕ್ಕಳನ್ನು ದೂರ ಮಾಡಿದ. ಅಂತಹ ನಾಯಕರು ಇಂದು ನಮ್ಮ ನಾಡಿಗೆ ಬೇಕಾಗಿದ್ದಾರೆ’ ಎಂದು ಅವರು ತಿಳಿಸಿದರು. 

 ‘12 ವರ್ಷದವನಿದ್ದಾಗ ನಾನೂ ಕಮ್ಯುನಿಸ್ಟ್‌ ವಿಚಾರಗಳಿಗೆ ಮಾರುಹೋಗಿದ್ದೆ. ಆಗ ಚಾರು ಮಜುಂದಾರ್‌ ಇಷ್ಟವಾಗುತ್ತಿದ್ದರು. ಇಂದು ಶಸ್ತ್ರಾಸ್ತ್ರಗಳ ಹೋರಾಟ ದೇಶದಲ್ಲಿ ಕೊನೆಗೊಂಡಿದೆ. ಅದನ್ನು ಬೆಂಬಲಿಸುವ ಮನೋಭಾವವನ್ನು ನಿವಾರಣೆ ಮಾಡಬೇಕಿದೆ. ನಿಖರವಾದ ಸಾಕ್ಷ್ಯಗಳು ಇವೆ ಎಂದಾದರೆ, ಅಂತಹ ಹೋರಾಟದ ಬೆಂಬಲಿಗರನ್ನು ಬಂಧಿಸುವುದು ತಪ್ಪಲ್ಲ. ಹಾಗೆಯೇ ತಪ್ಪಿತಸ್ಥರಲ್ಲದವರನ್ನು ಶಿಕ್ಷಿಸುವುದು ದೊಡ್ಡ ತಪ್ಪು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
**

‘ಸಂವಿಧಾನ ಬೀದಿಯಲ್ಲಿ, ಧರ್ಮ ಮನೆಯಲ್ಲಿ’ 
‘ಸಂವಿಧಾನ ಪರಿಪೂರ್ಣ ಗ್ರಂಥವೆಂದು ನಾವು ಅಂದುಕೊಂಡಿದ್ದೇವೆ. ಬದಲಾದ ಕಾಲಮಾನಕ್ಕೆ ಅದರ ಅಂಶಗಳು ಹೊಂದಿಕೆ ಆಗದಿದ್ದರೆ, ತಿದ್ದುಪಡಿ ಮಾಡಿ ಪರಿಪೂರ್ಣತೆ ಕಾಯ್ದುಕೊಳ್ಳುತ್ತೇವೆ. ಆದರೆ, ಧರ್ಮಗ್ರಂಥಗಳು ಹಾಗಲ್ಲ. ಅವುಗಳನ್ನು ಬದಲಾಯಿಸುವ ಆಯ್ಕೆ ಇಲ್ಲ. ಆದ್ದರಿಂದಲೇ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನಾವು ರಸ್ತೆಯಲ್ಲಿ ಸಂವಿಧಾನವನ್ನು ಅನುಸರಿಸೋಣ. ಮನೆಯೊಳಗೆ ಧರ್ಮಗ್ರಂಥ ಪಾಲಿಸೋಣ’ ಎಂದು ಕಿವಿಮಾತು ಹೇಳಿದರು.

 **

ದೈಹಿಕ ಕಾಮನೆಗಳ ದೃಷ್ಟಿಯಿಂದ ಸಲಿಂಗ ಕಾಮವನ್ನು ಒಪ್ಪುವಾಗ, ಸಾಮಾಜಿಕ ದೃಷ್ಟಿಕೋನ ಕಡೆಗಣಿಸಲಾಗದು
–ಸದ್ಗುರು ಜಗ್ಗಿ ವಾಸುದೇವ್‌

ಪ್ರಮುಖ ಸುದ್ದಿಗಳು