ಸುಳ್ಳು ಸಾಕ್ಷ್ಯ; ಡಿವೈಎಸ್ಪಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸುಳ್ಳು ಸಾಕ್ಷ್ಯಗಳಿಂದ ಕೂಡಿದ್ದ ದೋಷಾರೋಪ ಪಟ್ಟಿ ಸಲ್ಲಿಸಿ ನಿರಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದ ಆರೋಪದಡಿ ಡಿವೈಎಸ್ಪಿ (ನಿವೃತ್ತ) ಮಂಜುನಾಥ್‌ ವಿರುದ್ಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

‘2009ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ತನಿಖಾಧಿಕಾರಿ ಮಂಜುನಾಥ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ತೀರ್ಪು ನೀಡಿದೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣದ ವಿವರ: ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆ ಸಂಬಂಧ ಮಹಿಳೆಯ ಪತಿ ಹಾಗೂ ಅವರ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ (ಐಪಿಸಿ 498) ಹಾಗೂ ಕೊಲೆಯ ಉದ್ದೇಶವಿಲ್ಲದೆ ಸಂಭವಿಸಿದ ಸಾವು (ಐಪಿಸಿ 304) ಆರೋಪದಡಿ ಪ್ರಕರಣ ದಾಖಲಾಗಿತ್ತು.

ಅಂದು ಹಲಸೂರು ಉಪವಿಭಾಗದ ಎಸಿಪಿಯಾಗಿದ್ದ ಮಂಜುನಾಥ್‌, ಆರೋಪಿಗಳ ವಿರುದ್ಧ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳಿಗೆ ಶಿಕ್ಷೆಯನ್ನೂ ವಿಧಿಸಿತ್ತು. ಆ ಶಿಕ್ಷೆಯನ್ನು ಪ್ರಶ್ನಿಸಿದ್ದ ಆರೋಪಿಗಳು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

’ನಾವು ಯಾವುದೇ ತಪ್ಪು ಮಾಡಿಲ್ಲ. ತನಿಖಾಧಿಕಾರಿಯವರೇ ನಮ್ಮ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಿಂದಲೇ ನಮಗೆ ಶಿಕ್ಷೆಯಾಗಿದೆ. ನಮ್ಮ ಮೇಲ್ಮನವಿ ಪರಿಶೀಲಿಸಿ ನ್ಯಾಯ ಒದಗಿಸಿ’ ಎಂದು ಆರೋಪಿಗಳು ಅರ್ಜಿಯಲ್ಲಿ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ಅರ್ಜಿದಾರರು ಮಾಡಿದ್ದ ಆರೋಪಗಳು ಸಾಬೀತಾಗಿದ್ದರಿಂದ ತನಿಖಾಧಿಕಾರಿ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ಸೂಚಿಸಿತ್ತು.

ರಾಜ್ಯದಲ್ಲೇ ಮೊದಲ ಎಫ್‌ಐಆರ್‌: ಸುಳ್ಳು ಸಾಕ್ಷ್ಯಗಳಿಂದ ಕೂಡಿದ್ದ ದೋಷಾರೋಪ ಪಟ್ಟಿ ಸಲ್ಲಿಸಿ ನಿರಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದ ಪೊಲೀಸ್‌ ತನಿಖಾಧಿಕಾರಿಯ ವಿರುದ್ಧ ದಾಖಲಾದ ರಾಜ್ಯದ ಮೊದಲ ಎಫ್‌ಐಆರ್‌ ಇದಾಗಿದೆ.

‘ಪೊಲೀಸರು, ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಯಾವುದೇ ಪ್ರಕರಣವಿದ್ದರೂ  ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ತನಿಖಾಧಿಕಾರಿಯೇ ಸುಳ್ಳು ಸಾಕ್ಷ್ಯ ಹುಟ್ಟುಹಾಕಿದ್ದಾರೆ. ಆ ಮೂಲಕ ನಿರಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇದೀಗ ಆರೋಪಿಗಳಿಗೆ ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ’ ಎಂದು ಆರೋಪಿಗಳ ಸ್ನೇಹಿತರೊಬ್ಬರು ಹೇಳಿದರು.

ಪ್ರಮುಖ ಸುದ್ದಿಗಳು