₹25 ಲಕ್ಷ ವಂಚನೆ; ಕರವೇ ಕಾರ್ಯಕರ್ತನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ‘ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ಶಶಿಕುಮಾರ್, ನಿವೇಶನ ಕೊಡಿಸುವುದಾಗಿ ಹೇಳಿ ನಂಬಿಸಿ ₹25 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಎಂ.ಬಿ.ನಾಗಲಕ್ಷ್ಮಿ ಎಂಬುವರು ಚಾಮರಾಜಪೇಟೆ ಠಾಣೆಗೆ ದೂರು ನೀಡಿದ್ದಾರೆ.

‘ಮಗನ ಸ್ನೇಹಿತನಾದ ಶಶಿಕುಮಾರ್, 2012ರಲ್ಲಿ ಪರಿಚಯವಾಗಿದ್ದ. 2016ರಲ್ಲಿ ನಾನು ಹಾಗೂ ಪತಿ ಸೇರಿ ನಿವೇಶನ ಖರೀದಿಸುವ ಸಂಬಂಧ ಮಾತನಾಡುತ್ತಿದ್ದೆವು. ಅದನ್ನು ಕೇಳಿಸಿಕೊಂಡಿದ್ದ ಆರೋಪಿ, ‘ನಾನು ಕರವೇ ಕಾರ್ಯಕರ್ತ. ತಾವರಕೆರೆ ಹಾಗೂ ಗಿರಿನಗರದಲ್ಲಿ ನಿವೇಶನಗಳಿವೆ. ಅದನ್ನು ಕೊಡಿಸುತ್ತೇನೆ’ ಎಂದಿದ್ದ. ನಂತರ, ಹಂತ ಹಂತವಾಗಿ ಹಣ ಪಡೆದುಕೊಂಡಿದ್ದ’ ಎಂದು ನಾಗಲಕ್ಷ್ಮಿಯವರು ದೂರಿನಲ್ಲಿ ತಿಳಿಸಿದ್ದಾರೆ.

‘ಹಣ ಪಡೆದು ಎರಡು ವರ್ಷವಾದರೂ ಆರೋಪಿ ನಿವೇಶನ ಕೊಡಿಸಿಲ್ಲ. ಹಣವನ್ನೂ ಮರಳಿಸಿಲ್ಲ. ಅದನ್ನು ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಹೇಳಿದ್ದಾರೆ.

ಚಾಮರಾಜಪೇಟೆ ಪೊಲೀಸರು, ‘ಆರೋಪಿ, ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತ. ವಿಜಯನಗರ ಯುವ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ. ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದರು.

ಪ್ರಮುಖ ಸುದ್ದಿಗಳು