ಕಾಮಗಾರಿ ಆರಂಭಿಸಲು ಮುನಿಯಪ್ಪ ಆಗ್ರಹ

ನವದೆಹಲಿ: ಕರ್ನಾಟಕದ ಕೋಲಾರ ಬಳಿ ಸ್ಥಾಪಿಸಲು ಉದ್ದೇಶಿಸಿರುವ ರೈಲು ಬೋಗಿಗಳ (ಕೋಚ್‌) ನಿರ್ಮಾಣ ಘಟಕದ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸಂಸದ ಕೆ.ಎಚ್. ಮುನಿಯಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಮಂಗಳವಾರ ಇಲ್ಲಿ ರೈಲ್ವೆ ಸಚಿವ ಪೀಯೂಷ್ ಗೊಯಲ್ ಅವರನ್ನು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿದ ಅವರು, 2014ರಲ್ಲೇ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ ಈ ಕುರಿತ ಒಪ್ಪಂದ ಆಗಿದೆ ಎಂದು ತಿಳಿಸಿದರು.

ಕೋಲಾರ ಮತ್ತು ಶ್ರೀನಿವಾಸಪುರದ ನಡುವೆ ಈಗಾಗಲೇ 600 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಅಗತ್ಯವಿರುವ ಇನ್ನೂ 600 ಎಕರೆ ಜಮೀನು ನೀಡಲು ರೈತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದು, ಕರ್ನಾಟಕ ಸರ್ಕಾರ ಸ್ವಾಧೀನ ಪ್ರಕ್ರಿಯೆಗೆ ಸಿದ್ಧವಿದೆ ಎಂದರು. ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸಬೇಕು ಎಂದರು.

 

ಪ್ರಮುಖ ಸುದ್ದಿಗಳು