ಮೇಕೆದಾಟು ಯೋಜನೆ ವಿರುದ್ಧ ಕಾನೂನು ಹೋರಾಟ: ತಮಿಳುನಾಡು ಸರ್ಕಾರ

ಸೇಲಂ (ತಮಿಳುನಾಡು): ಕರ್ನಾಟಕವು ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸುವುದನ್ನು ತಡೆಯಲು ಕಾನೂನಿನ ಮೊರೆ ಹೋಗುತ್ತೇವೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

‘ಮೇಕೆದಾಟುವಿನಲ್ಲಿ ಯಾವುದೇ ಅಣೆಕಟ್ಟೆ ನಿರ್ಮಿಸಬಾರದು ಎಂಬ ನಮ್ಮ ನಿಲುವಿಗೆ ನಾವು ಈಗಲೂ ಬದ್ಧರಾಗಿದ್ದೇವೆ. ತಮಿಳುನಾಡಿನಲ್ಲಿ ಬರದ ಪರಿಸ್ಥಿತಿ ಇದ್ದಾಗ, ಕರ್ನಾಟಕದ ಅಣೆಕಟ್ಟೆಗಳು ತುಂಬಿದ್ದವು. ಆದರೂ ಅವರು ನಮಗೆ ಕುಡಿಯಲೂ ನೀರು ಕೊಟ್ಟಿರಲಿಲ್ಲ. ಈಗ ಕಾವೇರಿಗೆ ಮತ್ತೊಂದು ಅಣೆಕಟ್ಟೆ ನಿರ್ಮಿಸಿದರೆ ನಮಗೆ ನೀರೇ ಇರುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಹೇಳಿದ್ದಾರೆ.

‘ಕರ್ನಾಟಕವು ಕಾವೇರಿಗೆ ಯಾವುದೇ ಅಣೆಕಟ್ಟೆ ನಿರ್ಮಿಸುವ ಮೊದಲು ತಮಿಳುನಾಡಿನ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಮ್ಮ ಅನುಮತಿ ಪಡೆಯದೆಯೇ ಮಾಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸಲು ಕರ್ನಾಟಕ ಮುಂದಾಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೇಕೆದಾಟು ಯೋಜನೆಗೆ ತಮಿಳುನಾಡು ಒಡ್ಡುತ್ತಿರುವ ತಡೆ ನಿವಾರಣೆಗೆ ಸಭೆ ನಡೆಸುವಂತೆ ಮೋದಿ ಅವರಿಗೆ ಕುಮಾರಸ್ವಾಮಿ ಮನವಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿಗಳು