ಅಂಗಡಿಯಲ್ಲೇ ಟೈಲರ್ ಆತ್ಮಹತ್ಯೆ, ಮಹಿಳೆ ಶವವೂ ಪತ್ತೆ

ಬೆಂಗಳೂರು: ವಿವೇಕನಗರದ ವನ್ನಾರಪೇಟೆಯಲ್ಲಿ ವೃದ್ಧ ಟೈಲರ್‌ವೊಬ್ಬರು ಅಂಗಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಳಿ ಕೆಲಸ ಮಾಡುತ್ತಿದ್ದ ಮಹಿಳೆ ಕೂಡ ಅದೇ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ರಾಜೇಂದ್ರನ್ (70) ಹಾಗೂ ಮಡಿಕೇರಿಯ ಉಮಾ (65) ಮೃತರು. ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿವೆ. ಸೋಮವಾರ ಮಧ್ಯಾಹ್ನ ಅಂಗಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಪೊಲೀಸರು ಬೀಗ ಒಡೆದು ಬಾಗಿಲು ತೆಗೆದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ಉಮಾ ಅವರ ಮುಂಗೈ ಕುಯ್ದು ರಕ್ತ ಸೋರಿಕೆಯಾಗಿದೆ. ತಲೆಯಲ್ಲೂ ಗಾಯದ ಗುರುತುಗಳಿವೆ. ರಾಜೇಂದ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ, ಅವರೂ ಮುಂಗೈ ನರ ಕತ್ತರಿಸಿಕೊಂಡು ಪ್ರಾಣ ಬಿಟ್ಟಿರಬಹುದು ಅಥವಾ ರಾಜೇಂದ್ರನ್ ಅವರೇ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಉಮಾ ಅವರನ್ನು ಕೊಂದಿರಬಹುದು. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ವಿವೇಕನಗರ ಪೊಲೀಸರು ಹೇಳಿದರು.

‘45 ವರ್ಷಗಳಿಂದ ಟೈಲರ್ ಅಂಗಡಿ ಇಟ್ಟುಕೊಂಡಿರುವ ರಾಜೇಂದ್ರನ್, ಸೇನಾ ಸಮವಸ್ತ್ರಗಳನ್ನು ಹೊಲಿದು ಹಲಸೂರಿನ ಸೇನಾ ತರಬೇತಿ ಶಿಬಿರಕ್ಕೆ ಪೂರೈಸುತ್ತಿದ್ದರು. ಅವರ ಪತ್ನಿ–ಮಕ್ಕಳು ದೊಮ್ಮಲೂರಿನಲ್ಲಿ ನೆಲೆಸಿದ್ದಾರೆ. 1981ರಿಂದಲೂ ಉಮಾ ಈ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದರು. ಇಬ್ಬರೂ ಮಳಿಗೆ ಹಿಂಭಾಗದ ಕೊಠಡಿಯಲ್ಲಿ ಒಟ್ಟಿಗೇ ನೆಲೆಸಿದ್ದರು. ರಾಜೇಂದ್ರನ್ ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಶನಿವಾರ ಸಂಜೆವರೆಗೂ ಇಬ್ಬರೂ ಅಂಗಡಿಯಲ್ಲಿ ಇದ್ದುದನ್ನು ಸ್ಥಳೀಯರು ನೋಡಿದ್ದರು. ಮರುದಿನ ಬೆಳಿಗ್ಗೆಯಿಂದ ಅವರಿಬ್ಬರೂ ಹೊರಗೆ ಕಾಣಿಸಿರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಇಬ್ಬರೂ ಮೃತಪಟ್ಟು 42 ತಾಸುಗಳು ಕಳೆದಿವೆ ಎಂದಿದ್ದಾರೆ. ಅಂದರೆ, ಶನಿವಾರ ರಾತ್ರಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಉಮಾ ಸಂಬಂಧಿಕರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.

ಪ್ರಮುಖ ಸುದ್ದಿಗಳು