ಅನಿಲ ಸ್ಫೋಟ; ಐವರು ಪೊಲೀಸರಿಗೆ ಗಾಯ

ಬೆಂಗಳೂರು: ತಳ್ಳುಗಾಡಿಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಹೋದಾಗ ಅಡುಗೆ ಅನಿಲದ ಸಿಲಿಂಡರ್ ಸಿಡಿದು ನಾಲ್ವರು ಪೊಲೀಸರು ಹಾಗೂ ಗೃಹರಕ್ಷಕ ಗಾಯಗೊಂಡಿದ್ದಾರೆ.

ಮಡಿವಾಳ ಠಾಣೆ ಸಮೀಪ ಬಶೀರ್ ಎಂಬುವರು ರಸ್ತೆ ಬದಿ ತಳ್ಳುಗಾಡಿಯಲ್ಲಿ ತಿಂಡಿ–ಚಹಾ ಮಾರುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಲ್ಲಿದ್ದ ಆಟೊ ಚಾಲಕರು ಕೂಡಲೇ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ಎಸ್‌ಐ ಹಾಲೇಗೌಡ, ಹೆಡ್‌ಕಾನ್‌ಸ್ಟೆಬಲ್ ಶಿವಶಂಕರ್, ಕಾನ್‌ಸ್ಟೆಬಲ್‌ಗಳಾದ ಕುಮಾರ್, ಸಂಜಯ್ ಹಾಗೂ ಗೃಹರಕ್ಷಕ ಶರಣಪ್ಪ ಅವರು ಗಾಡಿ ಮೇಲೆ ನೀರೆರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಿಲಿಂಡರ್ ಸಿಡಿದು, ಬೆಂಕಿಯ ಕೆನ್ನಾಲಗೆ ಅವರತ್ತ ವ್ಯಾಪಿಸಿದೆ.

ಗಾಯಗೊಂಡ ಸಿಬ್ಬಂದಿಯನ್ನು ಇತರ ಪೊಲೀಸರು ತಕ್ಷಣ ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಪೊಲೀಸರು ಬಶೀರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಅವರನ್ನು ವಶಕ್ಕೆ ಪಡೆದಿದ್ದಾರೆ.

 

ಪ್ರಮುಖ ಸುದ್ದಿಗಳು