ಬಾಲ್ಕನಿಯಿಂದ ಬಂದು 4 ಫ್ಲ್ಯಾಟ್‌ಗಳಲ್ಲಿ ದೋಚಿದ!

ಬೆಂಗಳೂರು: ಸರ್ಜಾಪುರ ರಸ್ತೆ ಕೈಕೊಂಡ್ರಹಳ್ಳಿಯಲ್ಲಿರುವ ‘ಬ್ರೆನ್ ಸೆಲೆಸ್ಟಿಯಾ ಅಪಾರ್ಟ್‌ಮೆಂಟ್‌’ ಸಮುಚ್ಚಯಕ್ಕೆ ನುಗ್ಗಿದ ಕಳ್ಳನೊಬ್ಬ, ಕೆಲವೇ ನಿಮಿಷಗಳಲ್ಲಿ ನಾಲ್ಕು ಫ್ಲ್ಯಾಟ್‌ಗಳಿಂದ ನಗ–ನಾಣ್ಯ ಹಾಗೂ ಮೊಬೈಲ್‌ಗಳನ್ನು ದೋಚಿದ್ದಾನೆ.

ಸೋಮವಾರ ನಸುಕಿನಲ್ಲಿ ಈ ಕೃತ್ಯ ನಡೆದಿದ್ದು, ಫ್ಲ್ಯಾಟ್ (ಸಂಖ್ಯೆ ಎ–203) ನಿವಾಸಿ ಸಲ್ಮಾ ಅವರು ಬೆಳ್ಳಂದೂರು ಠಾಣೆಗೆ ದೂರು ಕೊಟ್ಟಿದ್ದಾರೆ.

ಕಟ್ಟಡದ ಕೆಲ ನಿವಾಸಿಗಳು ಭಾನುವಾರ ರಾತ್ರಿ ಕಿಟಕಿಯನ್ನು ಲಾಕ್ ಮಾಡದೆ ಮಲಗಿದ್ದರು. ಪಕ್ಕದ ಕಟ್ಟಡದ ಮೂಲಕ ಅಪಾರ್ಟ್‌ಮೆಂಟ್‌ನ ಬಾಲ್ಕನಿಗೆ ಬಂದಿರುವ ಕಳ್ಳ, ಸಲ್ಮಾ ಅವರಫ್ಲ್ಯಾಟ್‌ನ ಕಿಟಕಿ ಗಾಜು ಸರಿಸಿ ಒಳನುಗ್ಗಿದ್ದಾನೆ. ಕೋಣೆಯಲ್ಲಿದ್ದ ಮೂರು ಚಿನ್ನದ ಹಾಗೂ ಎರಡು ವಜ್ರದ ಉಂಗುರಗಳನ್ನು ತೆಗೆದುಕೊಂಡು ಕಿಟಕಿ ಮೂಲಕವೇ ಹೊರಬಂದಿದ್ದಾನೆ ಎಂದು ಪೊಲೀಸರು ವಿವರಿಸಿದರು.

ಅದೇ ರೀತಿಯಾಗಿ ಪಕ್ಕದ ಮನೋಜ್ ಕುಮಾರ್ ಅವರ ಫ್ಲ್ಯಾಟ್‌ಗೆ (ಬಿ–202) ನುಗ್ಗಿ ರೆಡ್‌ಮಿ ಹಾಗೂ ವಿವೊ ಮೊಬೈಲ್ ತೆಗೆದುಕೊಂಡಿದ್ದಾನೆ.ಬಳಿಕ ಸುಮೇಧ ಬಿಸ್ವಾಸ್ ಎಂಬುವರ ಫ್ಲ್ಯಾಟ್‌ನಲ್ಲಿ (ಸಿ–203) ಒನ್‌ಪ್ಲಸ್ಮೊಬೈಲ್, ಪವರ್ ಬ್ಯಾಂಕ್, ₹250 ನಗದು ಹಾಗೂ ಪೂಜಾ ಜೈನ್ಎಂಬುವರ ಫ್ಲ್ಯಾಟ್‌ನಲ್ಲಿ (ಎ–103) ₹ 1,650 ತೆಗೆದುಕೊಂಡು ಬಾಲ್ಕನಿಯಿಂದಲೇ ಪರಾರಿಯಾಗಿದ್ದಾನೆ.

ಬೆಳಿಗ್ಗೆ 6 ಗಂಟೆಗೆ ಎಚ್ಚರಗೊಂಡ ಸಲ್ಮಾ, ಕಿಟಕಿ ಗಾಜು ತೆರೆದಿರುವುದನ್ನುಕಂಡು ಅನುಮಾನಗೊಂಡಿದ್ದಾರೆ. ಅಲ್ಮೆರಾ ಪರಿಶೀಲಿಸಿದಾಗ ಐದು ಉಂಗುರಗಳು ಕಳವಾಗಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಇತರ ನಿವಾಸಿಗಳು ಸಹ ತಮ್ಮ ಮೊಬೈಲ್ ಹಾಗೂ ಹಣ ಕಳವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲರೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

‘3 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿತ್ತು. ಬಾಲ್ಕನಿ ಹತ್ತಿರ ಹೋದಾಗ ಯಾರೋ ಒಬ್ಬ ಕಾಂಪೌಂಡ್ ಬಳಿ ನಿಂತಿದ್ದ. ಸೆಕ್ಯುರಿಟಿ ಗಾರ್ಡ್ ಇರಬಹುದು ಎಂದುಕೊಂಡು ಪುನಃ ನಿದ್ರೆಗೆ ಜಾರಿದೆ. ಬೆಳಿಗ್ಗೆ ಎದ್ದಾಗ ನನ್ನ ಮೊಬೈಲ್ ಕಾಣೆಯಾಗಿತ್ತು. ಎಲ್ಲೋ ಇಟ್ಟಿರಬಹುದೆಂದು ಸುಮಾರು ಹೊತ್ತು ಹುಡುಕಿದೆ. ಇದೇ ವೇಳೆ, ಅಕ್ಕಪಕ್ಕದ ಫ್ಲ್ಯಾಟ್‌ಗಳಲ್ಲಿ ಕಳ್ಳತನವಾಗಿರುವ ವಿಚಾರ ತಿಳಿಯಿತು. ನನ್ನ ಫ್ಲ್ಯಾಟ್‌ನ ಕಿಟಕಿ ಗಾಜು ಸಹ ಸರಿದಿದ್ದರಿಂದ, ಮೊಬೈಲನ್ನು ಆ ಕಳ್ಳನೇದೋಚಿದ್ದಾನೆ ಎಂಬುದು ಖಾತ್ರಿಯಾಯಿತು’ ಎಂದು ಸುಮೇಧ ಹೇಳಿಕೆ ಕೊಟ್ಟಿದ್ದಾಗಿ ಬೆಳ್ಳಂದೂರು ಪೊಲೀಸರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿಗಳು