ಉತ್ತರ ಪ್ರದೇಶದ ಕಾರ್ಖಾನೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ: 6 ಸಾವು

ಲಖನೌ:  ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿರುವ ಖಾಸಗಿ ಪೆಟ್ರೋಲ್ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು 6 ಮಂದಿ ಸಾವಿಗೀಡಾಗಿದ್ದಾರೆ. 8 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಲ್ಲಿ ಮೂರು ಮಂದಿ ನಾಪತ್ತೆಯಾಗಿದ್ದಾರೆ.

ಇಲ್ಲಿನ ಕೋತ್ವಾಲಿ ನಗರದ ನಗೀನಾ ರಸ್ತೆಯಲ್ಲಿರುವ ಮೋಹಿತ್ ಪೆಟ್ರೋ ಕೆಮಿಕಲ್ ಕಾರ್ಖಾನೆಯಲ್ಲಿ ಕಾರ್ಮಿಕರು ಮಿಥೇನ್ ಗ್ಯಾಸ್ ಟ್ಯಾಂಕ್ ದುರಸ್ತಿ ಮಾಡಿಕೊಳ್ಳುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.
 

6 ಮಂದಿ ಕಾರ್ಮಿಕರು ಘಟನಾ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೃತ ಕಾರ್ಮಿಕರನ್ನು ಕಮಲ್‍ವೀರ್, ಲೋಕೇಂದ್ರ, ರವಿ, ಚೆತ್ರಾಮ್, ವಿಕ್ರಾಂತ್  ಮತ್ತು ಬಲ್ ಗೋವಿಂದ್ ಎಂದು ಗುರುತಿಸಲಾಗಿದೆ,.

ಕಪಿಲ್, ಪರ್ವೇಜ್ ಮತ್ತು ಅಭಯ್ ರಾಮ್ ಎಂಬವರು ನಾಪತ್ತೆಯಾಗಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಾರ್ಮಿಕರ ಮೃತದೇಹ ಮೀಟರ್‍‍ನಷ್ಟು ದೂರ ಬಿದ್ದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
 

ಪ್ರಮುಖ ಸುದ್ದಿಗಳು