ಗಲ್ಲಿ ಗಲ್ಲಿಗಳಲ್ಲೂ ಗಣಪನ ಪ್ರತಿಷ್ಠಾಪನೆಗೆ ಕ್ಷಣಗಣನೆ

ವಿಜಯಪುರ: ವಿಘ್ನ ವಿನಾಶಕ, ವಿಘ್ನ ನಿವಾರಕ, ವಿನಾಯಕ, ಗೌರಿ ಸುತ, ಗಜ ನಾಯಕ, ಏಕದಂತ, ಬೆನಕ... ಹಲ ಹೆಸರುಗಳಿಂದ ಪೂಜೆಗೊಳಪಡುವ ಗಣಪನ ಪ್ರತಿಷ್ಠಾಪನೆಗೆ ಗುಮ್ಮಟ ನಗರಿಯೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶ ಸಜ್ಜುಗೊಂಡಿದೆ.

ನಗರದ ಗಲ್ಲಿ ಗಲ್ಲಿ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶದ ಓಣಿ ಓಣಿಗಳಲ್ಲೂ, ಗಜ ನಾಯಕನ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗೂ ಅಂತಿಮ ಸ್ಪರ್ಶ ನೀಡಲಾಗಿದೆ. ಬುಧವಾರ ರಾತ್ರಿಯಿಡಿ ಅಂತಿಮ ಸಿದ್ಧತೆ ಪೂರೈಸಿದ ಗಜಾನನ ಮಂಡಳಿ, ತರುಣ ಮಂಡಳಿಗಳು ಪ್ರತಿಷ್ಠಾಪನೆಗಾಗಿ ಚಲೋ ಮುಹೂರ್ತಕ್ಕೆ ಕಾದಿವೆ.

ಗಣೇಶ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ. ಪೆಂಡಾಲ್‌ ನಿರ್ಮಾಣ, ವಿದ್ಯುತ್‌ ದೀಪಾಲಂಕಾರ, ಸ್ವಾಗತ ಮೆರವಣಿಗೆ, ಗಣಪ ಮೂರ್ತಿ ತರುವಿಕೆ ಎಲ್ಲವೂ ಸಂಪೂರ್ಣಗೊಂಡಿದ್ದು, ಗುರುವಾರ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ.

ಗೌರಿ ಸುತನ ಸ್ವಾಗತಕ್ಕೆ ಗುಮ್ಮಟ ನಗರಿ ನವ ವಧುವಿನಂತೆ ಶೃಂಗಾರಗೊಂಡಿದೆ. ಮಾರುಕಟ್ಟೆ ಪ್ರಾಂಗಣಗಳಲ್ಲಿ ವಿದ್ಯುತ್‌ ಅಲಂಕಾರ ಅದ್ಧೂರಿಯಾಗಿ ನಡೆದಿದೆ. ಗಣೇಶ ಪ್ರತಿಷ್ಠಾಪಿಸುವ ಗಲ್ಲಿ ಗಲ್ಲಿಯಲ್ಲೂ ವಿದ್ಯುತ್‌ ಅಲಂಕಾರ ಭರ್ಜರಿಯಾಗಿ ಕಂಗೊಳಿಸುತ್ತಿದೆ. ಯುವಕರ ಸಂಭ್ರಮ ಮುಗಿಲು ಮುಟ್ಟಿದೆ.

ನಗರದ ಬಹುತೇಕ ರಸ್ತೆಗಳು ಸಾರ್ವಜನಿಕ ಗಣೇಶೋತ್ಸವಕ್ಕಾಗಿಯೇ ಬಂದ್‌ ಆಗಿವೆ. ಬಹುತೇಕ ಕಡೆ ರಸ್ತೆಗಳ ಬದಿಯೇ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಓಣಿಯ ಜನರೆಲ್ಲ ಒಟ್ಟಾಗಿ ಕಲೆತು ಸಂಭ್ರಮದಿಂದ ಆರಾಧಿಸಲು ಸಿದ್ದರಾಗಿದ್ದಾರೆ.

ಈ ಸಿದ್ಧತೆ ವಿಜಯಪುರ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಪ್ರಮುಖ ಪಟ್ಟಣಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂಗಾರು ಕೈಕೊಟ್ಟು, ಹಿಂಗಾರು ಇನ್ನೂ ಆರಂಭಗೊಳ್ಳದಿದ್ದರೂ ಗಣೇಶೋತ್ಸವದ ಸಂಭ್ರಮ ಕಳೆಗುಂದಿಲ್ಲ. ಎಲ್ಲೆಡೆ ಗಜಾನನ ಸ್ತುತಿಗೆ ಚಾಲನೆ ಸಿಕ್ಕಿದೆ.

ಮಹಾರಾಷ್ಟ್ರದ ಪ್ರಭಾವ: ಮಹಾರಾಷ್ಟ್ರದ ಗಾಢ ಪ್ರಭಾವ ದಟ್ಟೈಸಿರುವ ವಿಜಯಪುರ ಜಿಲ್ಲೆಯಲ್ಲಿ ಗಣೇಶೋತ್ಸವ ಸಾರ್ವಜನಿಕ ಉತ್ಸವವಾಗಿ ವಿಜೃಂಭಣೆಯಿಂದ ನಡೆಯಲಿದೆ. ಇಲ್ಲಿನ ಗಜಾನನ ಮಂಡಳಿಗಳ ಪದಾಧಿಕಾರಿಗಳು ಪ್ರತಿ ವರ್ಷವೂ ಮುಂಬಯಿ, ಪುಣೆಗಳಿಗೆ ತೆರಳಿ ಅಲ್ಲಿನ ಮಾದರಿ ವೀಕ್ಷಿಸುವುದು ವಾಡಿಕೆ.

ಪುಣೆ, ಮುಂಬಯಿ ಗಣೇಶೋತ್ಸವ ವೀಕ್ಷಿಸುವ ಮಂಡಳಿಗಳು ಮುಂದಿನ ವರ್ಷ ಅದೇ ಮಾದರಿಯ ಗಣೇಶ ಮೂರ್ತಿಯನ್ನು ನಗರದಲ್ಲಿ ಪ್ರತಿಷ್ಠಾಪಿಸುತ್ತಾರೆ. ಕೆಲವೊಂದು ಮಂಡಳಿಗಳು ಆ ಉತ್ಸವದಲ್ಲಿ ಪಾಲ್ಗೊಳ್ಳುವ ಖ್ಯಾತ ಜನಪದ ಕಲಾವಿದರ ತಂಡಗಳನ್ನು ವಿಜಯಪುರಕ್ಕೆ ಆಹ್ವಾನಿಸುವುದು ಸಂಪ್ರದಾಯವಾಗಿ ಮಾರ್ಪಟ್ಟಿದೆ.

ಗಜಾನನ ಮಂಡಳಗಳಿಂದ ಈಗಾಗಲೇ ವಿಭಿನ್ನ ಸ್ವರೂಪದ ಗಜ ನಾಯಕನ ಮೂರ್ತಿಗಳ ಖರೀದಿ ಮುಗಿದಿದೆ. ಅಲಂಕಾರ ಸಾಮಗ್ರಿಗಳ ಖರೀದಿಯ ಅಂತಿಮ ಹಂತ ಬಿರುಸಾಗಿದೆ. ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಸಹ ಮೂರ್ತಿ ಖರೀದಿಸಿದ್ದಾರೆ. ಕೆಲವರು ಗುರುವಾರ ಶಾಸ್ತ್ರೋಕ್ತವಾಗಿ ಮನೆಯ ಒಯ್ಯಲಿದ್ದಾರೆ.

ಪ್ರಮುಖ ಸುದ್ದಿಗಳು