ಹಬ್ಬಕ್ಕೆ ‘ಇಷ್ಟಲಿಂಗ ಗಣಪತಿ’ ಮೆರುಗು

ದಾವಣಗೆರೆ: ಪ್ರತಿ ಬಾರಿಯ ಗಣೇಶ ಹಬ್ಬದಲ್ಲೂ ವಿನೂತನ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ದಾಣವಗೆರೆಯ ಹಿಂದೂ ಯುವ ಶಕ್ತಿ ಸಂಘಟನೆಯು ಈ ಬಾರಿ ಸುಮಾರು 15,000 ಇಷ್ಟಲಿಂಗಗಳನ್ನು ಬಳಸಿ 13 ಅಡಿ ಎತ್ತರದ ಭವ್ಯ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದೆ.

ನಗರದ ಎಂ.ಸಿ.ಸಿ ‘ಎ’ ಬ್ಲಾಕ್‌ನ ತೋಗಟವೀರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ 27ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದಲ್ಲಿ ಇಷ್ಟಲಿಂಗ ಗಣಪ ಈ ಬಾರಿಯ ವಿಶೇಷವಾಗಿದೆ. ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ ನೇತೃತ್ವದಲ್ಲಿ ಹಿಂದೂ ಯುವ ಶಕ್ತಿ ಸಂಘಟನೆಯ ಕಾರ್ಯಕರ್ತರು ಹೊಸ ಹೊಸ ಮಾದರಿಯ ಗಣೇಶನನ್ನು ತಯಾರಿಸಿ ಹಬ್ಬಕ್ಕೆ ಪ್ರತಿ ಬಾರಿಯೂ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತಿದ್ದಾರೆ.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸೆ. 3ರಂದು ಧ್ವಜಸ್ತಂಭ ಪೂಜೆ ಮಾಡಿ ಇಷ್ಟಲಿಂಗಗಳಿಗೆ ದೀಕ್ಷೆ ನೀಡುವುದರೊಂದಿಗೆ ಗಣಪತಿ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

‘1992ರಲ್ಲಿ ಮೊದಲ ಬಾರಿಗೆ ಗಣಪತಿಯನ್ನು ಕೂರಿಸಲಾಯಿತು. ಮೊದಲ ಐದು ವರ್ಷಗಳ ಕಾಲ ಸರಳವಾಗಿ ವಿನಾಯಕ ಮಹೋತ್ಸವ ಆಚರಿಸಲಾಗಿತ್ತು. 1997ರಲ್ಲಿ ಮೊದಲ ಪೂಜಾ ಸಾಮಗ್ರಿಗಳನ್ನೇ ಬಳಸಿ ಗಣಪತಿಯನ್ನು ನಿರ್ಮಿಸಲಾಯಿತು. ಆ ವರ್ಷದಿಂದ ಪ್ರತಿ ಬಾರಿಯೂ ಪೂಜಾ ಸಾಮಗ್ರಿಗಳನ್ನು ಬಳಸಿ ವಿನೂತನವಾಗಿ ಗಣಪತಿ ಮೂರ್ತಿಯನ್ನು ನಿರ್ಮಿಸುತ್ತಿದ್ದೇವೆ’ ಎಂದು ಹಿಂದೂ ಯುವ ಶಕ್ತಿಯ ಸಂಚಾಲಕ ಪಿ.ಸಿ. ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2016ರಲ್ಲಿ ವಿನಾಯಕ ಮಹೋತ್ಸವದ ಬೆಳ್ಳಿ ಹಬ್ಬ ಇದ್ದುದರಿಂದ ಸಣ್ಣ ಸಣ್ಣ ಬೆಳ್ಳಿ ಗಣಪತಿಯನ್ನೇ ಬಳಸಿಕೊಂಡು ಗಣೇಶನ ಮೂರ್ತಿಯನ್ನು ನಿರ್ಮಿಸಲಾಗಿತ್ತು. ಈ ಬಾರಿ ಇಷ್ಟಲಿಂಗಗಳಿಂದ ಗಣಪತಿ ನಿರ್ಮಿಸಲು ಮುಂದಾಗಿದ್ದೇವೆ. ಸುಮಾರು 13 ಸಾವಿರ ಇಷ್ಟಲಿಂಗಗಳನ್ನು ಬಳಸಿ 13 ಅಡಿ ಗಣಪತಿ ಮೂರ್ತಿಯನ್ನು ನಿರ್ಮಿಸಲು ಉದ್ದೇಶಿಸಿದ್ದೆವು. ಆದರೆ, ಮೂರ್ತಿಗೆ ಸುಮಾರು 15 ಸಾವಿರ ಇಷ್ಟಲಿಂಗಗಳು ಬೇಕಾದವು’ ಎಂದು ಹೇಳಿದರು.

‘ಬಾಳೆಹೊನ್ನೂರಿನ ರಂಭಾಪುರಿ ಮಠ ಹಾಗೂ ದಾನಿಗಳು ಇಷ್ಟಲಿಂಗವನ್ನು ತರಿಸಿಕೊಟ್ಟಿದ್ದಾರೆ. ಒಂದು ಲಿಂಗಕ್ಕೆ ₹ 14ರಿಂದ ₹ 15 ಬೆಲೆ ಇದೆ. ಇಷ್ಟಲಿಂಗಗಳನ್ನು ಬಳಸಿ ಅಲಂಕಾರಿಕ ಗಣಪತಿ ಮೂರ್ತಿಯನ್ನು ನಿರ್ಮಿಸಲಾಗಿದೆ. ಪೂಜೆಗಾಗಿ 5 ಅಡಿಯ ಗಣಪತಿಯನ್ನು ಗುರುವಾರ ಪ್ರತ್ಯೇಕವಾಗಿ ಪ್ರತಿಷ್ಠಾಪಿಸುತ್ತೇವೆ. ಸೆ. 23ರಂದು ಜನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ತೆರಳಿ ಪೂಜೆಗೆ ಬಳಸಿದ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ಬಳಿಕ 13 ಅಡಿಯ ಗಣಪತಿಗೆ ಬಳಸಿದ್ದ ಇಷ್ಟಲಿಂಗಗಳನ್ನು ತೆಗೆದು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೊದಲು ನಾವೇ ಮೂರ್ತಿಯ ಶೇಪ್‌ ಸಿದ್ಧಪಡಿಸಿಕೊಳ್ಳುತ್ತಿದ್ದೆವು. ಈ ಬಾರಿ ಪಶ್ಚಿಮ ಬಂಗಾಳದ ಕಲಾವಿದರು ಮೂರ್ತಿಯ ಬಾಹ್ಯ ರೂಪವನ್ನು ನಿರ್ಮಿಸಿಕೊಟ್ಟಿದ್ದಾರೆ. ಒಂದು ಶೀಟ್‌ನಲ್ಲಿ ಸುಮಾರು 250 ಲಿಂಗಗಳನ್ನು ಅಂಟಿಸಿ ಅದನ್ನು ಮೂರ್ತಿಯ ಹೊರ ಮೈಗೆ ಹಚ್ಚಿದ್ದೇವೆ. ಮೊದಲು 12 ಅಡಿ ಗಣಪತಿ ನಿರ್ಮಿಸಲು ಉದ್ದೇಶಿಸಲಾಗಿತ್ತು. 10 ಸಾವಿರ ಲಿಂಗ ಸಾಕಾಗಬಹುದು ಎಂದುಕೊಂಡಿದ್ದೆವು. ಮೂರ್ತಿಯ ಎತ್ತರ ಹಾಗೂ ಅಗಲ ಜಾಸ್ತಿಯಾಗಿದ್ದರಿಂದ ಸುಮಾರು 15 ಸಾವಿರ ಲಿಂಗಗಳನ್ನು ಬಳಸಬೇಕಾಯಿತು. ಸುಮಾರು 15 ಕಾರ್ಯಕರ್ತರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು’ ಎಂದು ಇಷ್ಟಲಿಂಗ ಅಂಟಿಸುತ್ತಿದ್ದ ಗುರು ತಿಳಿಸಿದರು.

‘ನಾವು ಹಲವು ಬಗೆಯ ಬೃಹತ್‌ ಗಣಪತಿಗಳನ್ನು ನಿರ್ಮಿಸಿದ್ದೇವೆ. ಕೊಲ್ಕತ್ತಾದಲ್ಲಿ ದ್ರಾಕ್ಷಿ, ಬಟನ್‌ಗಳನ್ನು ಅಂಟಿಸಿ ಗಣಪತಿಯನ್ನು ಮಾಡಿದ್ದೆವು. ಇದೇ ಮೊದಲ ಬಾರಿಗೆ ಲಿಂಗವನ್ನು ಬಳಸಿಕೊಂಡು ಗಣಪತಿ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಹುಲ್ಲು, ಮಣ್ಣು ಹಾಗೂ ಪೇಪರ್‌ ಬಳಸಿ ಮೂರ್ತಿಯನ್ನು ನಿರ್ಮಿಸಿದ್ದೇವೆ’ ಎಂದ ಪಶ್ಚಿಮ ಬಂಗಾಳದ ಕಲಾವಿದ ಸೋನು ಪಾಲ್‌, ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡತೊಡಗಿದರು.

ವೈವಿಧ್ಯಮಯ ಗಣಪತಿ ಮೂರ್ತಿ

ತೋಗಟವೀರ ಸಮುದಾಯ ಭವನದಲ್ಲಿ 21 ವರ್ಷಗಳಿಂದ ಗಣಪತಿ ಪೂಜಾ ಸಾಮಗ್ರಿಗಳಿಂದ ಬೃಹತ್‌ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. 1997ರಲ್ಲಿ ತೆಂಗಿನಕಾಯಿಯಿಂದ ಗಣಪತಿ ಮೂರ್ತಿ ನಿರ್ಮಿಸುವ ಮೂಲಕ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಲಾಯಿತು. ನಂತರ ಪ್ರತಿ ವರ್ಷ ಕ್ರಮವಾಗಿ ಹಸಿ ಅಡಿಕೆ, ಮೆಕ್ಕೆಜೋಳದ ತೆನೆ, ಕಡ್ಲೆಕಾಳು (ನವಧಾನ್ಯ), ಉತ್ತತ್ತಿ, ಬಾದಾಮಿ, ಡೈಮಂಡ್‌, ಒಂದು ರೂಪಾಯಿ ನಾಣ್ಯ, ರೇಷ್ಮೆ ಗೂಡು, ರುದ್ರಾಕ್ಷಿ, ಯಾಲಕ್ಕಿ, ಬೆಟ್ಟೆ ಅಡಿಕೆ, ಮುತ್ತಿನಮಣಿ, ಕವಡೆ, ಗಣಪತಿ ಮೂರ್ತಿಗಳು, ಮೋದಕ, ಗೋಡಂಬಿ, ಅರಿಶಿಣ ಕೊಂಬು, ಕಡಲೆಕಾಯಿ, ಸಣ್ಣ ಬೆಳ್ಳಿ ಗಣಪತಿ ಹಾಗೂ ಕಳೆದ ವರ್ಷ ಐದು ರೂಪಾಯಿ ನಾಣ್ಯಗಳಿಂದ ಬೃಹತ್‌ ಗಣಪತಿ ಮೂರ್ತಿಯನ್ನು ನಿರ್ಮಿಸಲಾಗಿತ್ತು.

**

ಅಂಕಿ– ಅಂಶಗಳು

15 ಸಾವಿರ ಮೂರ್ತಿಗೆ ಇಷ್ಟಲಿಂಗ ಬಳಕೆ

13 ಅಡಿ ಗಣಪತಿ ಮೂರ್ತಿಯ ಎತ್ತರ

11 ದಿನ ಕಳೆದ ನಂತರ ವಿಸರ್ಜನೆ

ಪ್ರಮುಖ ಸುದ್ದಿಗಳು