ಉಚಿತ ಹೆಲ್ಮೆಟ್‌ಗೆ ಮುಗಿಬಿದ್ದ ಸವಾರರು

ಬೆಂಗಳೂರು: ಉಚಿತ ಹೆಲ್ಮೆಟ್‌ ವಿತರಣೆಗೆ ಮುಂದಾದ ವೇಳೆ ಜನ ಮುಗಿಬಿದ್ದ ಪರಿಣಾಮ ಪರಿಸ್ಥಿತಿ ನಿಭಾಯಿಸಲಾಗದೆ ಕಂಪನಿಯವರು ಕಾರ್ಯಕ್ರಮವನ್ನೇ ರದ್ದುಗೊಳಿಸಿದರು. 

ನಗರದ ಲ್ಯಾವೆಲ್ಲೆ– ರೆಸಿಡೆನ್ಸಿ ರಸ್ತೆಯ ಜಂಕ್ಷನ್ ಪ್ರದೇಶದಲ್ಲಿ ಸುಝುಕಿ ಕಂಪನಿಯು ಸಂಚಾರ ಜಾಗೃತಿ ಮೂಡಿಸುವ ಸಲುವಾಗಿ, ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಹೆಲ್ಮೆಟ್‌ ವಿತರಣೆಗೆ ಮುಂದಾಯಿತು. ಒಂದು ಗೂಡ್ಸ್‌ ಆಟೋರಿಕ್ಷಾ ತುಂಬಾ ಹೆಲ್ಮೆಟ್‌ ತಂದಿದ್ದ ಕಂಪನಿಯ ಸಿಬ್ಬಂದಿ ಪೊಲೀಸರ ನೆರವಿನಿಂದ ವಿತರಣೆಗೆ ಮುಂದಾದರು. ಸುದ್ದಿ ಮಿಂಚಿನಂತೆ ಹರಡಿತು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರೆಲ್ಲಾ ತಮ್ಮ ಹೆಲ್ಮೆಟನ್ನು ಬಚ್ಚಿಟ್ಟು ಹೊಸ ಹೆಲ್ಮೆಟ್‌ಗಾಗಿ ಗುಂಪಿನೊಳಗೆ ಸೇರಿಕೊಂಡರು. ಮೊದಲು ಬಂದ ಕೆಲವರಿಗೆ ಹೆಲ್ಮೆಟ್‌ ಸಿಕ್ಕಿತು. ದಟ್ಟಣೆ ಹೆಚ್ಚಾದಂತೆಲ್ಲಾ ಸಿಬ್ಬಂದಿ ಮತ್ತು ಪೊಲೀಸರು ಅಸಹಾಯಕರಾದರು. ಗದರಿಕೆ, ಬೈಗುಳಗಳೂ ಕೇಳಿಬಂದವು. 

ಕಂಪನಿ ಸಿಬ್ಬಂದಿ ಸವಾರರಿಂದ ಅವರ ವಾಹನ ಮಾಹಿತಿ, ಚಾಲನಾ ಪರವಾನಗಿ ಪ್ರತಿ ನೋಡಿ ಅದರ ಮಾಹಿತಿ, ಮೊಬೈಲ್‌ ಸಂಖ್ಯೆ ದಾಖಲಿಸಿಕೊಂಡರು. ದಟ್ಟಣೆ ಹೆಚ್ಚಾದಂತೆಲ್ಲಾ ಪೊಲೀಸರ ಸಹಾಯದಿಂದ ಗುಂಪನ್ನು ಚದುರಿಸಿ ಅಲ್ಲಿಂದ ಜಾಗ ಖಾಲಿ ಮಾಡಿದರು. 

ಕೋರಮಂಗಲದಲ್ಲಿಯೂ ಇದೇ ಕಂಪನಿ ಹೆಲ್ಮೆಟ್‌ ವಿತರಿಸಿದೆ.  

 

ಪ್ರಮುಖ ಸುದ್ದಿಗಳು