ಗಣೇಶನ ಪ್ರತಿಮೆ ಮಾರಾಟಕ್ಕೆ ತಿಕ್ಕಾಟ

ಹೊಸಪೇಟೆ: ಗಣಪನ ಪ್ರತಿಮೆ ಮಾರಾಟಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹಾಗೂ ಅನ್ಯ ಜಿಲ್ಲೆಯ ವ್ಯಾಪಾರಿಗಳ ಬುಧವಾರ ತಿಕ್ಕಾಟ ನಡೆಯಿತು.

ಹೊರಗಿನವರಿಗೆ ನಗರದಲ್ಲಿ ಪ್ರತಿಮೆಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಪಟ್ಟು ಹಿಡಿದು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲೆ ಭಾಗ್ಯನಗರದ ವ್ಯಾಪಾರಿಗಳು ಮೇನ್‌ ಬಜಾರ್‌ನಲ್ಲೇ ಸಾಂಕೇತಿಕವಾಗಿ ಪ್ರತಿಭಟಿಸಿದರು.

‘ನಗರದಲ್ಲಿ ಸ್ಥಳೀಯರಾದ ಸೂರ್ಯವಂಶ ಆರ್ಯ ಕ್ಷತ್ರಿಯ ಸಮುದಾಯದವರು ಅನೇಕ ವರ್ಷಗಳಿಂದ ಗಣೇಶನ ಪ್ರತಿಮೆಗಳನ್ನು ತಯಾರಿಸಿ, ಮಾರಾಟ ಮಾಡುತ್ತ ಬಂದಿದ್ದಾರೆ. ಅವರಿಗಷ್ಟೇ ಪ್ರತಿಮೆಗಳ ಮಾರಾಟಕ್ಕೆ ಅವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಅವಕಾಶ ಕಲ್ಪಿಸಬಾರದು. ಇಲ್ಲವಾದಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಅದನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿರುವವರಿಗೆ ಸಮಸ್ಯೆಯಾಗುತ್ತದೆ’ ಎಂದು ವೀರೇಶ ಚಿತ್ರಗಾರ, ನರಸಪ್ಪ, ಸುಮಂಗಲಾ, ಸಾವಿತ್ರಮ್ಮ ಹೇಳಿದರು.

‘ಈ ವರ್ಷ ಹೊಸದಾಗಿ ಮಾರಾಟಕ್ಕೆ ಬಂದಿಲ್ಲ. ಐವತ್ತು ವರ್ಷಗಳಿಂದ ಮೇನ್‌ ಬಜಾರ್‌ನಲ್ಲಿ ಪ್ರತಿಮೆಗಳನ್ನು ಮಾರಾಟ ಮಾಡುತ್ತ ಬಂದಿದ್ದೇವೆ. ಸಾಕಷ್ಟು ಬಂಡವಾಳ ಹಾಕಿದ್ದೇವೆ. ಹಬ್ಬದ ಕೊನೆಯ ದಿನ ವಿನಾಕಾರಣ ತಕರಾರು ತೆಗೆದಿದ್ದಾರೆ. ಯಾರು, ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದು. ಅದಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ನಮಗೂ ಕಾನೂನು ಗೊತ್ತಿದೆ’ ಎಂದು ಭಾಗ್ಯನಗರದ ಸುಮಿತ್ರಮ್ಮ, ಹನುಮವ್ವ, ಲಲಿತಾ ಸಿಟ್ಟು ಹೊರಹಾಕಿದರು.

ಗಣೇಶ ಚತುರ್ಥಿಗೆ ಒಂದೇ ದಿನ ಉಳಿದ ಕಾರಣ, ಇಬ್ಬರೂ ಕೆಲ ಗಂಟೆಗಳ ನಂತರ ತಮ್ಮ ತಮ್ಮ ಸ್ಥಳಗಳಿಗೆ ಹೋಗಿ ಪ್ರತಿಮೆಗಳನ್ನು ಮಾರಾಟ ಮಾಡಿದರು.

ಪ್ರಮುಖ ಸುದ್ದಿಗಳು