ಆರ್‌ಟಿಸಿ ತಿದ್ದುಪಡಿ ಮಾಡಿದ ಜಿಲ್ಲಾಡಳಿತ

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದ 19 ಎಕರೆ 14 ಗುಂಟೆಯ ಪಹಣಿಯನ್ನು ಜಿಲ್ಲಾಡಳಿತ ಕೊನೆಗೂ ತಿದ್ದು‍ಪಡಿ ಮಾಡಿದೆ.

ಕಂಪ್ಯೂಟರೀಕೃತ ಪಹಣಿ ಹಾಗೂ ಮ್ಯುಟೇಷನ್‌ನಲ್ಲಿ ಸರ್ಕಾರಿ ಬೀಳು ಭೂಮಿ ಎಂದು ತಿದ್ದುಪಡಿ ಮಾಡಿ ದೊಡ್ಡಬಳ್ಳಾಪುರದ ಉಪವಿಭಾಗಾಧಿಕಾರಿ ಮಹೇಶ್‌ಬಾಬು ಬುಧವಾರ ಆದೇಶ ಹೊರಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ₹8 ಕೋಟಿ ಮೌಲ್ಯದ ಸರ್ಕಾರಿ ಬೀಳು ಭೂಮಿಯನ್ನು ಕಬಳಿಕೆ ಮಾಡಲಾಗಿತ್ತು. ಈ ಸಂಬಂಧ ವಿಜಯಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. 1968–69ರಿಂದ 2001–2002ರ ಸಾಲಿನ ಕೈಬರಹದ ಪಹಣಿಯ ಕಾಲಂ 9ರಲ್ಲಿ ಸರ್ಕಾರಿ ಬೀಳು ಎಂದಿದ್ದು, ಕಾಲಂ 12(2)ರಲ್ಲಿ ವಿ.ಪಿ.ಫಾರೆಸ್ಟ್‌ ಎಂದು ದಾಖಲಾಗಿದೆ. 2016–17ನೇ ಸಾಲಿನಲ್ಲಿ ಗ್ರಾಮಲೆಕ್ಕಿಗರಿಗೆ ನೀಡಿರುವ ಗಣಕೀಕೃತ ಪಹಣಿಯಲ್ಲಿಯೂ ಸರ್ಕಾರಿ ಬೀಳು ಎಂಬ ಉಲ್ಲೇಖವಿತ್ತು.

ಈ ನಡುವೆ, ಈ ಜಾಗ ಹುಚ್ಚಪ್ಪ ಬಿನ್‌ ನಂಜಪ್ಪ ಅವರಿಗೆ ಮಂಜೂರಾಗಿದೆ ಎಂದು ಆರ್‌ಟಿಸಿ ಕಲಂ (9)ರಲ್ಲಿ ದಾಖಲಾಗಿತ್ತು. ಈ ಜಾಗವನ್ನು 1939ರಲ್ಲಿ ಹರಾಜು ಮೂಲಕ ನೀಡಲಾಗಿದೆ ಎಂದೂ ಉಲ್ಲೇಖಿಸಲಾಗಿತ್ತು. ಭೂಮಿ ತಂತ್ರಾಂಶಕ್ಕೆ ಕನ್ನ ಹಾಕಿ ಪಹಣಿಯಲ್ಲಿ ತಿದ್ದುಪಡಿ ಮಾಡಲಾಗಿತ್ತು. ಈ ವಿಷಯದ ಬಗ್ಗೆ ಜಿಲ್ಲಾಡಳಿತವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿತ್ತು.

‘ತಾಂತ್ರಿಕವಾಗಿ ಲಾಗಿನ್‌ ಆಗಿರುವ ವಿವರಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ತಂತ್ರಾಂಶದ ಪ್ರವೇಶಾವಕಾಶದ ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಭೂಮಿ ತಂತ್ರಾಂಶ ಹ್ಯಾಕ್‌ ಆಗಿಲ್ಲ. ಭೂಮಿ ತಂತ್ರಾಂಶದಲ್ಲಿ ಭೂದಾಖಲೆಗಳ ಮಾಹಿತಿ ಕೋಶವು ಇಂಟರ್‌ನೆಟ್‌ನಲ್ಲಿ ಇರುವುದಿಲ್ಲ ಹಾಗೂ ಹೊರಗಿನ ವ್ಯಕ್ತಿಗಳು ‍ಪ್ರವೇಶ ಮಾಡಲು ಸಾಧ್ಯವಿಲ್ಲ’ ಎಂದು ಭೂದಾಖಲೆಗಳ ಸರ್ವೆ ಇಲಾಖೆಯ ಆಯುಕ್ತ ಮುನೀಷ್‌ ಮೌದ್ಗಿಲ್‌ ತಿಳಿಸಿದ್ದಾರೆ.

‘ಪ್ರತಿಯೊಂದು ಪಹಣಿಯನ್ನು ತಂತ್ರಾಂಶದ ಮೂಲಕ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಬೇರೆ ಯಾವುದೇ ಪಹಣಿ ಅಕ್ರಮವಾಗಿ ಬದಲಾವಣೆ ಆಗಿಲ್ಲ. ಭೂಮಿ ದತ್ತಾಂಶ ಹಾಗೂ ದಾಖಲೆಗಳು ಸುರಕ್ಷಿತವಾಗಿವೆ. ಪಹಣಿ ತಿದ್ದುಪಡಿ ಮಾಡಿರುವ ಪ್ರಕರಣದ ಆರೋಪಿಗಳ ಬಂಧನ ಶೀಘ್ರದಲ್ಲಿ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ಮೊದಲ ಪ್ರಕರಣ ಅಲ್ಲ: ಭೂಮಿ ತಂತ್ರಾಂಶಕ್ಕೆ ಕನ್ನ ಹಾಕಿರುವ ಮೊದಲ ಪ್ರಕರಣ ಇದಲ್ಲ. ಈ ಹಿಂದೆ 2002ರಲ್ಲಿ ಮಂಗಳೂರಿನಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಜಾಗವನ್ನು ಖಾಸಗಿಯವರ ಹೆಸರಿಗೆ ಮಾಡುವ ಪ್ರಯತ್ನ ನಡೆದಿತ್ತು. ಎರಡು ವರ್ಷಗಳ ಹಿಂದೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 9 ಎಕರೆ ಸರ್ಕಾರಿ ಜಾಗದ ಪಹಣಿ ಬದಲಾವಣೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲೂ ಇಂತಹುದೇ ಪ್ರಕರಣ ದಾಖಲಾಗಿತ್ತು.

ಪ್ರಮುಖ ಸುದ್ದಿಗಳು