ಬದುಕು ಬದಲಿಸಿದ ‘ಸಿಹಿ’

ಕಂಪ್ಲಿ: ಆಂಧ್ರದಿಂದ ವಲಸೆ ಬಂದು ಬದುಕು ಕಟ್ಟಿಕೊಂಡವರ ಯಶೋಗಾಥೆ ಇದು. ಮನೆಯಲ್ಲೇ ಸಿಹಿ ತಿನಿಸು ತಯಾರಿಸಿ ಅದಕ್ಕೆ ಉದ್ಯಮದ ಸ್ವರೂಪ ನೀಡಿದರು. ಅಷ್ಟೇ ಅಲ್ಲ, ಅನೇಕ ಜನರಿಗೆ ಕೆಲಸ ಕೂಡ ಕೊಟ್ಟರು.

ಇದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪಿಸಿಪಿಲ್ಲೆ ಗ್ರಾಮದ ಸುಬ್ಬಯ್ಯ ಅವರ ಕುರಿತ ಪೀಠಿಕೆ. 30 ವರ್ಷಗಳ ಹಿಂದೆ ಸುಬ್ಬಯ್ಯ ಅವರ ಮನೆತನದವರು ಸ್ವಂತ ಊರು ತೊರೆದು ಪಟ್ಟಣಕ್ಕೆ ಬಂದಿದ್ದರು. ನೇಕಾರಿಕೆ ಇವರ ಮುಖ್ಯ ವೃತ್ತಿಯಾಗಿತ್ತು. ಆದರೆ, ಅದರಿಂದ ಬದುಕು ನಡೆಸುವುದು ದುಸ್ತರವಾಗಿತ್ತು. ಮಾವಂದಿರಾದ ಮುಪ್ಪುರಿ ವೆಂಕಟೇಶಪ್ಪ, ಮುಪ್ಪುರಿ ನರಸಿಂಗಪ್ಪ, ಜಿ. ಕ್ರಿಷ್ಟಯ್ಯ ಅವರ ನೆರವಿನೊಂದಿಗೆ ಕೆಲ ವರ್ಷ ಹೋಟೆಲ್‌ ನಡೆಸಿದರು. ಅದರಲ್ಲಿ ಕೂಡ ಯಶಸ್ಸು ಸಿಗಲಿಲ್ಲ. ನಂತರ ಅವರು ಮನೆಯಲ್ಲೇ ಸಿಹಿ ತಯಾರಿಸಿ, ಮಾರಾಟ ಮಾಡಲು ಶುರು ಮಾಡಿದರು. ಸ್ವತಃ ಅವರೇ ಮಾರುಕಟ್ಟೆ ಸೃಷ್ಟಿಸಿಕೊಂಡರು. ಅದೀಗ ಚಂದನ್‌ ಸ್ವೀಟ್ಸ್‌ ತಯಾರಿಕ ಘಟಕ ಮತ್ತು ಮಹೇಶ್ವರಿ ಸ್ವೀಟ್ಸ್‌ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.

ಮಕ್ಕಳಾದ ಜಿ. ನಾಗರಾಜ, ಜಿ. ಸುಧಾಕರ ಅವರು ಕೈಜೋಡಿಸಿದ ನಂತರ ಇವರ ಚಟುವಟಿಕೆ ಮತ್ತಷ್ಟು ವಿಸ್ತಾರಗೊಂಡಿದೆ. ಇವರು ತಯಾರಿಸುವ ಸಿಹಿಗೆ ಜಿಲ್ಲೆ ಸೇರಿದಂತೆ ಕೊಪ್ಪಳ, ರಾಯಚೂರಿನಲ್ಲೂ ಬಹಳ ಬೇಡಿಕೆ ಇದೆ. ಅಲ್ಲಿನ ವ್ಯಾಪಾರಿಗಳೇ ಖುದ್ದು ಅವರ ಬಳಿಗೆ ಬಂದು ಖರೀದಿಸಿ ಕೊಂಡೊಯ್ಯುತ್ತಾರೆ.

ಇವರು ತಯಾರಿಸುವ ಮೈಸೂರು ಪಾಕ್‌, ಬಾದುಷಾ, ರಸಗುಲ್ಲಾ, ಜಿಲೇಬಿ, ಬೇಸನ್‌ ಉಂಡೆ, ಖಾಜಾಪುರಿ, ಚಕ್ಕುಲಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಮೊದಲು ಮನೆ ಮಂದಿಯಷ್ಟೇ ಕೂಡಿಕೊಂಡು ಸಿಹಿ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಈಗ ಬೇಡಿಕೆ ಹೆಚ್ಚಾಗಿರುವುದರಿಂದ ಸಣ್ಣ ಘಟಕ ತೆರೆದಿದ್ದಾರೆ. ಅಲ್ಲಿ 15 ಮಹಿಳೆಯರು, 12 ಜನ ಪುರುಷರು ಕೆಲಸ ನಿರ್ವಹಿಸುತ್ತಾರೆ. ಜತೆಗೆ ಸಗಟು ಮಳಿಗೆಯಲ್ಲಿ ನಾಲ್ವರು ಕೆಲಸ ಮಾಡುತ್ತಾರೆ. ಸಿಹಿ ಮಾರಾಟಕ್ಕಾಗಿ 18 ಏಜೆನ್ಸಿ ಮಾಡಿದ್ದಾರೆ. ಬೇಡಿಕೆ ಬಂದ ತಕ್ಷಣ ಆ ಏಜೆನ್ಸಿಗಳ ಮೂಲಕ ಪೂರೈಸುತ್ತಾರೆ. ನಾಲ್ಕು ಸ್ವಂತ ವಾಹನಗಳಿದ್ದು, ಅವುಗಳ ಮೂಲಕ ಅಗತ್ಯವಿರುವ ಕಡೆ ಸಿಹಿ ಪದಾರ್ಥಗಳನ್ನು ಕಳಿಸಿಕೊಡುತ್ತಾರೆ. ಸದ್ಯ ಇವರ ಬಳಿ 35 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ವಾರ್ಷಿಕ ವಹಿವಾಟು ₨20 ಲಕ್ಷಕ್ಕೂ ಹೆಚ್ಚಾಗಿದೆ.

ಇವರ ಘಟಕದಲ್ಲಿ ಕೆಲಸ ನಿರ್ವಹಿಸುವವರಿಗೆ ನಿತ್ಯ ₨400 ಕೂಲಿ ನೀಡುತ್ತಾರೆ. ಜತೆಗೆ ಉಪಾಹಾರ ಕೊಡುತ್ತಾರೆ. ಎಂಟು ಜನ ಕೂಲಿ ಕಾರ್ಮಿಕರಿಗೆ ಊಟ, ವಸತಿ ಕಲ್ಪಿಸಿ, ಸಂಬಳ ಕೊಡುತ್ತಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವು ನೀಡುತ್ತಿದ್ದಾರೆ.

ಸಿಹಿ ಪದಾರ್ಥಗಳ ಜತೆಗೆ ಬಟಾಣಿ, ಸೂರ್ಯಕಾಂತಿ ಬೀಜ, ಉತ್ತತ್ತಿ, ಖರ್ಜೂರವನ್ನು ಸಗಟು ಖರೀದಿಸಿ, ಬಿಡಿಯಾಗಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುತ್ತಾರೆ. ಅದಕ್ಕಾಗಿ 45 ಜನರನ್ನು ನೇಮಿಸಿಕೊಂಡಿದ್ದಾರೆ. ಒಬ್ಬರಿಗೆ ₨160 ಕೂಲಿ ಕೊಡುತ್ತಾರೆ. ಹೀಗೆ ಮನೆಯಲ್ಲಿ ಆರಂಭವಾದ ಸಣ್ಣ ಕೆಲಸ, ಉದ್ಯಮದ ಸ್ವರೂಪ ಪಡೆದುಕೊಂಡಿದೆ.

ಪ್ರಮುಖ ಸುದ್ದಿಗಳು