ಭಾರತ ಸೇರಿ 21 ದೇಶಗಳಲ್ಲಿ ಡ್ರಗ್ಸ್ ಜಾಲ: ಅಮೆರಿಕ

ವಾಷಿಂಗ್ಟನ್: ಮಾದಕವಸ್ತು ಉತ್ಪಾದನೆ ಹಾಗೂ ಸರಬರಾಜು ಮಾಡುವ 21 ದೇಶಗಳ ಪಟ್ಟಿಯಲ್ಲಿ ಭಾರತವನ್ನು ಅಮೆರಿಕ ಸೇರಿಸಿದೆ. ಏಷ್ಯಾ ಖಂಡದಲ್ಲಿ ಆಫ್ಗಾನಿಸ್ತಾನ, ಪಾಕಿಸ್ತಾನ ಹಾಗೂ ಮ್ಯಾನ್ಮಾರ್ ಕೂಡಾ ಇದರಲ್ಲಿ ಸ್ಥಾನ ಪಡೆದಿವೆ.

ಆಯಾ ದೇಶದ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರೂ, ಡ್ರಗ್ಸ್ ಉತ್ಪಾದನೆ ಹಾಗೂ ಸಾಗಣೆ ನಿಂತಿಲ್ಲ. ಆಯಾ ದೇಶಗಳ ಭೌಗೋಳಿಕ, ವಾಣಿಜ್ಯ ಹಾಗೂ ಆರ್ಥಿಕ ಅಂಶಗಳು ಇದಕ್ಕೆ ಕಾರಣ ಎಂದು ಅಮೆರಿಕ ಹೇಳಿದೆ.

ಕೊಲಂಬಿಯಾ, ಮೆಕ್ಸಿಕೊ ಮತ್ತು ಆಫ್ಗಾನಿಸ್ತಾನದಲ್ಲಿ ಕಳೆದೊಂದು ವರ್ಷದಿಂದ ಇದು ವ್ಯಾಪಕವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮೂರೂ ದೇಶಗಳು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ಹಾಗೂ ನಾಗರಿಕರ ಸುರಕ್ಷತೆ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದಿದ್ದಾರೆ.

ಮೆಕ್ಸಿಕೊ ಮೂಲದ ಹೆರಾಯಿನ್ ಹಾಗೂ ಕೊಲಂಬಿಯಾದ ಕೊಕೇನ್‌ ಮಾದಕ ವಸ್ತುಗಳು ಅಮೆರಿಕದಲ್ಲಿ ಪ್ರತಿವರ್ಷ ಸಾವಿರಾರು ಜನರನ್ನು ಬಲಿ ಪಡೆಯುತ್ತಿವೆ’ ಎಂದಿದ್ದಾರೆ.

ಮಾದವಕಸ್ತು ಸಾಗಣೆ ತಡೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿಗಳು