‘ಗಣೇಶ ಚೌತಿ’ ಆಚರಣೆಗೆ ಕಾರವಾರ ಸಜ್ಜು

ಕಾರವಾರ: ನಗರದಲ್ಲಿ ‘ಗಣೇಶ ಚೌತಿ’ ಹಬ್ಬದ ಸಂಭ್ರಮದ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಹಬ್ಬದ ಮುನ್ನಾ ದಿನವಾದ ಬುಧವಾರ ತಾತ್ಕಾಲಿಕ ಸಂತೆ ಮಾರುಕಟ್ಟೆಯನ್ನು ಪ್ರಾರಂಭಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಹಬ್ಬದ ತಯಾರಿಗೆ ತರಕಾರಿ, ಹಣ್ಣು– ಹಂಪಲು, ಅಗತ್ಯ ಸಾಮಗ್ರಿಯನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಹಾತ್ಮಾಗಾಂಧಿ ರಸ್ತೆ, ಕಮಲಾಕರ ರಸ್ತೆ, ನ್ಯಾಯಾಲಯದ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ನಗರದ ಜನತಾ ಬಜಾರ್‌ ರಸ್ತೆ, ಸುಭಾಷ್‌ ವೃತ್ತ, ಸವಿತಾ ವೃತ್ತದ ರಸ್ತೆಯುದ್ದಕ್ಕೂ ವ್ಯಾಪಾರಿಗಳು ಕುಳಿತಿದ್ದರು. ಬೆಳಿಗ್ಗೆಯಿಂದ ನೂರಾರು ಗ್ರಾಹಕರು ಭೇಟಿ ನೀಡಿದ ಕಾರಣ ನಗರದ ಹೃದಯಭಾಗದಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ವಾಹನ ದಟ್ಟಣೆ: ದಿನಸಿ ಅಂಗಡಿ, ಬಳೆ ಅಂಗಡಿ, ಉಡುಪು ಮಾರಾಟ ಮಳಿಗೆಗಳಿಗೂ ಜನರು ಲಗ್ಗೆ ಹಾಕಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಬೈಕ್‌, ಸ್ಕೂಟರ್ ಹಾಗೂ ಕಾರಿನ ಚಾಲಕರು ಮುಂದೆ ಸಾಗಲು ಹರಸಾಹಸ ಪಟ್ಟರು. ಆಯಕಟ್ಟಿನ ಜಾಗಗಳಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿ ಮಾಡಲಾಗಿತ್ತು.

ಮೂರು ಕಡೆ ವಿಸರ್ಜನೆ: ಪ್ರತಿಷ್ಠಾಪನೆಗೊಳ್ಳುವ ಗಣಪತಿಗಳನ್ನು ನದಿ ಮೂಲಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಹೀಗಾಗಿ, ನಗರದ ಮೂರು ಕಡೆಗಳಲ್ಲಿ ವಿಸರ್ಜನೆಗೆ ತಾತ್ಕಾಲಿಕ ಕೊಳಗಳ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಗೆ ತಲಾ ಒಬ್ಬರು ಅಧಿಕಾರಿಯನ್ನು ನಿಯೋಜಿಸಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಎಸ್.ಯೋಗೀಶ್ವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಟ್ಯಾಗೋರ್‌ ಕಡಲತೀರದಲ್ಲಿ ಕಿರಿಯ ಎಂಜಿನಿಯರ್ ವೀಣಾ ಬಾಂದೇಕರ್, ಹಬ್ಬುವಾಡದ ಬಳಿ ಸಹಾಯಕ ನೀರು ಸರಬರಾಜು ನಿರ್ವಾಹಕ ಪಿ.ಯು.ನಾಯ್ಕ, ಕೋಡಿಬಾಗದ ಕಾಳಿ ನದಿ ಉದ್ಯಾನವನದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಯಾಕೂಬ್ ಅವರು ಇರಲಿದ್ದಾರೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಸಂಚಾರಿ ಟ್ಯಾಂಕ್‌ಗಳ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದರು.

ಮೊಬೈಲ್‌ ಟ್ಯಾಂಕ್‌ಗಳಲ್ಲಿ ವಿಸರ್ಜಿಸಿದ ಗಣೇಶನ ಅವಶೇಷಗಳನ್ನು ಕೊಂಡೊಯ್ದು ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಖಾಲಿ ಜಾಗದಲ್ಲಿ ಪ್ರತ್ಯೇಕ ಗುಂಡಿ ತೆಗೆದು ಹಾಕಲಾಗುತ್ತದೆ. ತ್ಯಾಜ್ಯದಲ್ಲಿ ಅದನ್ನು ಮಿಶ್ರಣ ಮಾಡುತ್ತಿಲ್ಲ. ಜತೆಗೆ, ಮೂರ್ತಿಗಳ ಮೇಲಿನ ಹೂವು, ಜರಿ ಹಾರಗಳನ್ನು ತೆಗೆದು ವಿಸರ್ಜಿಸಲು ಸ್ಥಳದಲ್ಲಿ ಸೂಚಿಸಲಾಗುತ್ತದೆ. ಅವುಗಳನ್ನು ಸಂಗ್ರಹಿಸಲೆಂದೇ ಒಂದು ಬುಟ್ಟಿಯನ್ನು ಸ್ಥಳದಲ್ಲಿ ಇಡಲಾಗುತ್ತದೆ ಎಂದು ಹೇಳಿದರು.

ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ: ಸುಪ್ರೀಂ ಕೋರ್ಟ್‌ 2005ರ ಜುಲೈ18-ರಂದು ಆದೇಶಿಸಿದಂತೆ ವಸತಿ ಪ್ರದೇಶಗಳಲ್ಲಿ 45ರಿಂದ 55 ಡೆಸಿಬಲ್‌ಗಳಷ್ಟು ಶಬ್ದ ಹೊರಸೂಸುವ ಸಾಧನಗಳನ್ನು ಮಾತ್ರ ಅಳವಡಿಸಬಹುದು ಎಂದಿದೆ. ಅದೇ ಪ್ರಕಾರದಲ್ಲಿ ಧ್ವನಿವರ್ಧಕಗಳನ್ನೂ ಬಳಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ತಿಳಿಸಿದರು.

ಪ್ರತಿಷ್ಠಾಪನೆಗೆ ಮೊದಲು ಸ್ಥಳೀಯ ಆಡಳಿತ, ಪೊಲೀಸರು, ವಿದ್ಯುತ್ ನಿಗಮ, ಅಗ್ನಿಶಾಮಕ ದಳಗಳಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿಯ ಪ್ರತಿಷ್ಠಾಪನೆಗೆ ಆಯಾ ಸ್ಥಳೀಯ ಸಂಸ್ಥೆಗಳು ಅಥವಾ ತಾಲ್ಲೂಕು ಆಡಳಿತಗಳಿಂದ ಪರವಾನಗಿ ಪಡೆದಿರಬೇಕು. ರಾತ್ರಿ 10ರವರೆಗೆ ಧ್ವನಿವರ್ಧಕಗಳನ್ನು ಬಳಸಿ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ತಿಳಿಸಿದರು.

ಪ್ರತಿ ತಾಲ್ಲೂಕಿನ ಬಂದೋಬಸ್ತ್‌ಗೆ ಪೊಲೀಸರನ್ನು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಶಾಂತಿ– ಸುವ್ಯವಸ್ಥೆಯಿಂದ ಹಬ್ಬದ ಆಚರಣೆ ಮಾಡಬೇಕು. ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಮುಖ ಸುದ್ದಿಗಳು