ಪುನರ್ ವಸತಿಗೆ 15 ದಿನಗಳ ಗಡುವು

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಈಗಾಗಲೇ ಜೀತ ಪದ್ಧತಿಯಿಂದ ವಿಮುಕ್ತರಾದವರಿಗೆ 15 ದಿನಗಳ ಒಳಗೆ ಪುನರ್ ವಸತಿ ಸೌಕರ್ಯಗಳನ್ನು ಕಲ್ಪಿಸದಿದ್ದರೆ ಕರ್ತವ್ಯ ಲೋಪದಡಿ ಜಿಲ್ಲಾಡಳಿತದ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಜೀತ ವಿಮುಕ್ತಿ ಕರ್ನಾಟಕ ಸಂಘಟನೆ ರಾಜ್ಯ ಘಟಕದ ಸಂಚಾಲಕ ಕೆ.ನಾಗರಾಜ್ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತ ಜೀತ ವಿಮುಕ್ತರ ಬಗ್ಗೆ ಅಸಡ್ಡೆ ಮನೋಭಾವ ಹೊಂದಿದೆ. ಕನಿಷ್ಠ ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷ್ಯ ಧೋರಣೆ ತಾಳಿದೆ. ಜೀತ ವಿಮುಕ್ತರ ಪುನರ್ ವಸತಿ ಕಲ್ಪಿಸುವ ವಿಚಾರವಾಗಿ ಕನಿಷ್ಠ ಆರು ತಿಂಗಳಗೊಮ್ಮೆ ಸಭೆ ನಡೆಸಬೇಕು. ಆದರೆ ಜಿಲ್ಲೆಯಲ್ಲಿ ಅದು ನಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕು ಹಂತದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ತಿಂಗಳಿಗೊಮ್ಮೆ ಜಾಗೃತ ಸಭೆ ನಡೆಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಜಾಗೃತ ಸಮಿತಿ ಸದಸ್ಯರನ್ನು ಬದಲಾಯಿಸಿ ಜೀತದಾಳುಗಳ ಕ್ಷೇಮಾಭಿವೃದ್ದಿಗಾಗಿ ಶ್ರಮಿಸುತ್ತಿರುವ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳ ಸದಸ್ಯರನ್ನು ಸಮಿತಿಗೆ ನೇಮಕ ಮಾಡಬೇಕು. ಆದರೆ ಈವರೆಗೆ ತಹಶೀಲ್ದಾರ್ ಆ ಕೆಲಸ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷ ಕಳೆದರೂ ಇಂದಿಗೂ ಸಹ ಜೀತ ಪದ್ಧತಿ ಕುರಿತು ಪೂರ್ಣ ಪ್ರಮಾಣದ ಸಮೀಕ್ಷೆ ನಡೆಸಿಲ್ಲ. ಸ್ವತ: ಜಿಲ್ಲಾ ಟಾಸ್ಕ್‌ಫೊರ್ಸ್ ನಡೆಸಿದ ಸಮೀಕ್ಷೆಯಲ್ಲಿ ಪತ್ತೆ ಹಚ್ಚಿರುವ ನೂರಾರು ಜೀತದಾಳುಗಳಿಗೆ ಈವರೆಗೆ ಪುನರ್ವಸತಿಯಾಗಲಿ, ಕನಿಷ್ಠ ಬಿಡುಗಡೆ ಆದೇಶ ಪತ್ರ ನೀಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿರುವುದರಿಂದ ಜೀತ ವಿಮುಕ್ತರು ತೀರಾ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಅನೇಕರಿಗೆ ಪಡಿತರ ಚೀಟಿ, ಸಾಲ ಸೌಲಭ್ಯ ದೊರೆತಿಲ್ಲ. ಕೂಡಲೇ ಅಗತ್ಯ ಸವಲತ್ತುಗಳನ್ನು ಕಲ್ಪಿಸಿ ಕೊಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ರೂಪಿಸಲಾಗುತ್ತದೆ’ ಎಂದರು.

ಜೀವಿಕ ಸಂಘಟನೆ ರಾಜ್ಯ ಘಟಕದ ಸಂಘಟನಾ ಸಂಚಾಲಕ ಪಿ.ಜೆ.ಗೋವಿಂದ ರಾಜು, ಮಹಿಳಾ ಘಟಕದ ಸಂಚಾಲಕಿ ಎನ್.ಶಿವಮ್ಮ, ಜಿಲ್ಲಾ ಘಟಕದ ಸಂಚಾಲಕ ರವಿಕುಮಾರ್, ಮಹಿಳಾ ಘಟಕದ ಸಂಚಾಲಕಿ ಕಮ್ಮತಹಳ್ಳಿ ನಾರಾಯಣಮ್ಮ, ಸಂಘಟನಾ ಸಂಚಾಲಕ ಮೂರ್ತಿ ಗೌರಿಬಿದನೂರು ಮತ್ತು ಶಿಡ್ಲಘಟ್ಟ ತಾಲ್ಲೂಕು ಘಟಕದ ಸಂಚಾಲಕ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿಗಳು