ಬಿಜೆಪಿ ಶಾಸಕರೇ ಕಾಂಗ್ರೆಸ್‌ ಸೇರಲಿದ್ದಾರೆ

ಚಿತ್ರದುರ್ಗ: ಕಾಂಗ್ರೆಸ್‌ನ ಯಾವ ಶಾಸಕರೂ ಆಪರೇಷನ್‌ ಕಮಲಕ್ಕೆ ಬಲಿಯಾಗುವುದಿಲ್ಲ. ಅಗತ್ಯ ಬಿದ್ದಾಗ ಬಿಜೆಪಿ ಶಾಸಕರೇ ಕಾಂಗ್ರೆಸ್‌ಗೆ ಬರಲು ಸಿದ್ಧರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಮೇಶ್‌ ಮತ್ತು ಸತೀಶ್‌ ಜಾರಕಿಹೊಳಿ ಸಹೋದರರು ಪಕ್ಷ ತೊರೆಯುವುದ ಊಹಾಪೋಹ. ಅವರು ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರಾಗಿದ್ದು, ಪಕ್ಷ ಬಿಟ್ಟು ಹೋಗುವ ಪ್ರಶ್ನೆ ಉದ್ಭವಿಸಿಲ್ಲ. ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಂಪೂರ್ಣ ಸ್ಥಿರವಾಗಿದೆ. ಇದನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.

‘ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಅಭಿಪ್ರಾಯ ಭೇದ ಇತ್ತು. ಎಲ್ಲರೂ ಒಗ್ಗೂಡಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ. ಬಳ್ಳಾರಿ ಹಾಗೂ ಬೆಳಗಾವಿ ಕಾಂಗ್ರೆಸ್‌ಗೆ ಡಿ.ಕೆ.ಶಿವಕುಮಾರ್‌ ಅವರಿಂದ ತೊಂದರೆ ಆಗುತ್ತಿದೆ ಎಂಬುದು ಆಧಾರರಹಿತ ಆರೋಪ’ ಎಂದು ತಳ್ಳಿಹಾಕಿದರು.

‘ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಭರ್ತಿ ಹಾಗೂ ನಿಗಮ ಮಂಡಳಿ ನೇಮಕಾತಿಯಲ್ಲಿ ಎಲ್ಲ ಜಾತಿ ಹಾಗೂ ಪ್ರಾಂತ್ಯಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

 

ಪ್ರಮುಖ ಸುದ್ದಿಗಳು