‘ತವರಿಗೆ ಬಾ ತಂಗಿ’: ರಮ್ಯಾಗೆ ಗೌರಿ ಹಬ್ಬದ ಬಾಗಿನ ರವಾನಿಸಿದ ಬಿಜೆಪಿ ಕಾರ್ಯಕರ್ತರು

ಮಂಡ್ಯ: ಬಿಜೆಪಿ ಕಾರ್ಯಕರ್ತರು ಬುಧವಾರ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರಿಗೆ ಅಂಚೆಯ ಮೂಲಕ ಗೌರಿ ಹಬ್ಬದ ಬಾಗಿನ ರವಾನಿಸಿದರು. ‘ತವರಿಗೆ ಬಾ ತಂಗಿ’ ಎಂಬ ಸಂದೇಶದ ಮೂಲಕ ಹಬ್ಬಕ್ಕೆ ಆಹ್ವಾನ ನೀಡಿದರು.

ನಗರದ ಮುಖ್ಯ ಅಂಚೆ ಕಚೇರಿಗೆ ಬಂದ ಬಿಜೆಪಿ ಕಾರ್ಯಕರ್ತರು ಬಾಗಿನ ಸಾಮಗ್ರಿಗಳನ್ನು ರಮ್ಯಾ ಅವರ ದೆಹಲಿ ವಿಳಾಸಕ್ಕೆ ಕಳುಹಿಸಿದರು. ರಮ್ಯಾ ಅವರು ಕಳೆದ ವಿಧಾನಸಭಾ ಚುನಾವಣೆ, ನಗರಸಭಾ ಚುನಾವಣೆ ವೇಳೆಯಲ್ಲಿ ತವರಿಗೆ ಬಂದು ತಮ್ಮ ಹಕ್ಕು ಚಲಾಯಿಸಲಿಲ್ಲ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈಗಲಾದರೂ ತವರಿಗೆ ಬಂದು ಗೌರಿ– ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಹೀಗಾಗಿ ತಂಗಿಯನ್ನು ತವರಿಗೆ ಆಹ್ವಾನ ಮಾಡುತ್ತಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದರು.

ಬಿಜೆಪಿ ಕಾರ್ಯಕರ್ತರಾದ ಶಿವಕುಮಾರ್ ಆರಾಧ್ಯ, ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಮಹಾಂತಪ್ಪ, ನಿಂಗೇಗೌಡ ಇದ್ದರು.

ಪ್ರಮುಖ ಸುದ್ದಿಗಳು