ಶಹರ ಗಜಾನನಿಗೆ ಈಗ 67ರ ಹರೆಯ

ಬಾಗಲಕೊಟೆ: ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿ ಅದರಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಎಲ್ಲರನ್ನೂ ಒಂದುಗೂಡಿಸಲು ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಆರಂಭಿಸಿದರು.

ಅಂದು ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಬಾಗಲಕೋಟೆಯಲ್ಲೂ ಅದು ಪ್ರತಿಫಲನಗೊಂಡಿತು. ಆದರೆ ಸ್ವಾತಂತ್ರ್ಯಾನಂತರ ಆ ಕಾರ್ಯ ಇಲ್ಲಿ ಸಾಕಾರಗೊಂಡಿತು.

ಬಾಗಲಕೋಟೆಯಲ್ಲಿ 1952ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂದಿನ ಜಿಲ್ಲಾ ಪ್ರಚಾರಕರಾಗಿದ್ದ ಜ್ಯೋತಿಪ್ರಕಾಶ ಸಾಳುಂಕೆ, ಗಣಪತರಾವ ಕಾಂಬಳೆ, ಕಾಶಿನಾಥ ನಾವಲಗಿ, ಪರಪ್ಪ ಅಂಗಡಿ, ಮಲ್ಲಪ್ಪ ಹಂಡಿ, ಬಸವರಾಜ ಲುಕ್ಕ ಸೇರಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶ ಉತ್ಸವ ಆರಂಭಿಸಿದರು.

ಆಗ ಕಿಲ್ಲಾದ ಮರಾಠಾ ಗಲ್ಲಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಶಿಕ್ಷಕರಾದ ಹನಮಸಾಗರ, ಎಸ್.ಟಿ.ಪುರಾಣಿಕಮಠ, ಬೋಳಿಶೆಟ್ಟಿ ಇದಕ್ಕೆ ಕೈಜೋಡಿಸಿದರು. ಮರುವರ್ಷ (1953) ಈ ಗಣೇಶ ಮಂಡಳಿಗೆ ಬಾಗಲಕೋಟೆ ಶಹರ ಗಜಾನನ ಮಂಡಳಿ’ ಎಂದು ನಾಮರಣ ಮಾಡಲಾಯಿತು’ ಎಂದು ಆ ದಿನಗಳನ್ನು ಹಿರಿಯರಾದ ಮೋಹನ ದೇಶಪಾಂಡೆ ಸ್ಮರಿಸುತ್ತಾರೆ.

‘ಶಹರ ಗಜಾನನ ಮಂಡಳಿಯಿಂದ ಸತತ 67 ವರ್ಷಗಳಿಂದಲೂ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ.  ಮೊದಲು ಮಾಹೇಶ್ವರಿ ಮಂಗಲಭವನ, ಹಳೇ ಅಂಚೆ ಕಚೇರಿ ಹತ್ತಿರದ ತರಕಾರಿ ಮಾರುಕಟ್ಟೆ, ಕಿಲ್ಲಾ ಅಂಭಬಾಭವಾನಿ ದೇವಸ್ಥಾನದಲ್ಲಿ ನಂತರ ವಲ್ಲಭಬಾಯಿ ಚೌಕದಲ್ಲಿ ಪ್ರತಿಷ್ಠಾಪನೆ ಆರಂಭವಾಯಿತು’ ಎಂದು ಅವರು ಮಾಹಿತಿ ನೀಡುತ್ತಾರೆ.


ಗಣೇಶ ಮೂರ್ತಿ ವಿಶೇಷ:
‘ಶಹರ ಗಣೇಶ ಮೂರ್ತಿಯ ವೈಶಿಷ್ಟ್ಯವೆಂದರೆ ನಗರದ ಕಲಾವಿದ ಶಿವಪ್ಪ ಕರಿಗಾರ ಅವರೇ ಕಳೆದ 50 ವರ್ಷಗಳಿಂದ ಗಣೇಶ ಮೂರ್ತಿ ಸಿದ್ಧಪಡಿಸುತ್ತಿದ್ದಾರೆ. ಅದೂ ಮಣ್ಣಿನಿಂದ ಮಾಡಲಾಗುತ್ತದೆ, ಗಣೇಶನ ಹೊಟ್ಟೆಯಲ್ಲಿ ಪಂಚಕಜ್ಜಾಯ ಹಾಗೂ ತೆಂಗಿನ ಕಾಯಿ ಇಟ್ಟು ಹುಲ್ಲು, ಹತ್ತಿ ಬಳಸಿ ಗಣೇಶ ಮೂರ್ತಿ ತಯಾರಿಸುತ್ತಾರೆ. 

ನಾಗರ ಪಂಚಮಿಯ ನಂತರ ಸತತ ಒಂದು ತಿಂಗಳ ಕಾಲ ಈ ಕಾರ್ಯ ನಡೆಯುತ್ತದೆ. ಕರಿಗಾರ ಅವರ ಪೂರ್ವದಲ್ಲಿ ಮಾಯಾಚಾರಿ ಹಾಗೂ ಗೂಳಯ್ಯ ಸ್ವಾಮಿ ಮೂರ್ತಿ ಮಾಡುತ್ತಿದ್ದರು’ ಮಂಡಳಿ ಸದಸ್ಯ ನಾರಾಯಣ ದೇಸಾಯಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಉದ್ದೇಶ ಪರಿಪೂರ್ಣ: ‘ಬಾಲಗಂಗಾಧರ ತಿಲಕರ ಧ್ಯೇಯ ಮುಂದುವರೆಸುವ ಉದ್ದೇಶದಿಂದ ಇಲ್ಲಿ ಗಣೇಶೋತ್ಸವ ಆಚರಣೆ ವೇಳೆ  ಭಕ್ತಿ ಗೀತೆ, ದೇಶ ಭಕ್ತಿ ಗೀತೆ ಹಾಗೂ ದೇಸಿ ಆಟಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗುತ್ತದೆ’ ಎಂದು ದೇಸಾಯಿ ಹೇಳುತ್ತಾರೆ.

ಸದ್ಯ ಶಹರ ಗಣೇಶ ಮಂಡಳಿಯ ಅಧ್ಯಕ್ಷರಾಗಿ ಅಶೋಕ ಲಿಂಬಾವಳಿ, ಉಪಾಧ್ಯಕ್ಷರಾಗಿ ಗಣಪತಸಾ ದಾನಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ವಾಡಕರ್, ನಾರಾಯಣ ದೇಸಾಯಿ, ದಿನೇಶ ಬಾರ್ಸಿ, ಸುಭಾಷ್ ಕೊಠಾರಿ, ನಾಗರಾಜ ಹದ್ಲಿ, ಬಸು ಹೊನ್ನಳ್ಳಿ, ಚನ್ನವೀರ ಅಂಗಡಿ ಸದಸ್ಯರಾಗಿದ್ದಾರೆ.

ಪ್ರಮುಖ ಸುದ್ದಿಗಳು