ಗಣೇಶ ಹಬ್ಬಕ್ಕೆ ಖರೀದಿ ಸಂಭ್ರಮ

ಹಾಸನ : ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಡಗರದ ಸಿದ್ಧತೆ ಕೈಗೊಂಡರು.

ಬೆಲೆ ಏರಿಕೆ ನಡುವೆಯೂ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಬಂದಿದ್ದರು. ಮಹಾವೀರ ವೃತ್ತ, ಕಸ್ತೂರ ಬಾ ರಸ್ತೆಯಲ್ಲಿ ಗಣೇಶ್‌ ಮೂರ್ತಿಗಳನ್ನು ಸಾರ್ವಜನಿಕರು ಚೌಕಾಸಿ ಮಾಡಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಮಾರುಕಟ್ಟೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಬಂದು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಮಾವಿನ ತೋರಣ, ಬಾಳೆಕಂಬ, ಗೌರಿಗೆ ಬೇಕಾದ ಪೂಜಾ ಸಾಮಗ್ರಿ ಖರೀದಿಸಿದರು.

ಬಟ್ಟೆ ಅಂಗಡಿ, ದಿನಸಿ ಅಂಗಡಿ, ಬ್ಯಾಂಗಲ್ ಸ್ಟೋರ್ ಗಳಲ್ಲಿ ಮಹಿಳೆಯರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಹಬ್ಬದ ಹಿನ್ನೆಲೆಯಲ್ಲಿ ಸೇವಂತಿಗೆ, ಮಲ್ಲಿಗೆ, ಕಾಕಡ, ಕನಕಾಂಬರ ಮತ್ತು ಕಮಲದ ಹೂವಿನ ಬೆಲೆ ಏರಿಕೆಯಾಗಿವೆ. ಸೇವಂತಿಗೆ ಮಾರು ₹ 50 ರಿಂದ 80, ಮಲ್ಲಿಗೆ ಹೂವು ₹ 80, ಕನಕಾಂಬರ ₹ 60 ಮತ್ತು ಕಮಲದ ಹೂವು ₹ 10ಕ್ಕೆ ಮಾರಾಟವಾಗುತ್ತಿತ್ತು.

ಸೇಬು ಕೆ.ಜಿ.ಗೆ ₹ 200, ದಾಳಿಂಬೆ ₹ 100, ಮೋಸಂಬಿ ₹ 80, ಬಾಳೆಹಣ್ಣು ₹ 100, ಗೌರಿ ಪೂಜಾ ಸಾಮಗ್ರಿ ₹ 20 , ಜೋಡಿ ಬಾಳೆಕಂದು ₹ 30 ರಿಂದ ₹ 50, ಮಾವಿನ ಸೊಪ್ಪು ₹ 10ರಂತೆ ಮಾರಾಟ ಮಾಡಲಾಯಿತು.

ಕಲಾವಿದರು ವಿವಿಧ ಮಾದರಿಯ ಗಣೇಶ ಮೂರ್ತಿಗೆ ಅಂತಿಮ ರೂಪ ನೀಡುವ ಕಾಯಕದಲ್ಲಿ ತೊಡಗಿದ್ದರು. ಹುಲಿ ಮೇಲೆ ಕುಳಿತ ಗಣಪ,  ದರ್ಬಾರ್‌ ಗಣಪ, ರಾಜಾ ಗಣಪತಿ, ಆನೆ ಗಣಪ, ಸರ್ಪ ಗಣಪ, ನವಿಲು ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದುದು ಕಂಡು ಬಂತು. 

ಸಣ್ಣ ಹಾಗೂ ದೊಡ್ಡಗಾತ್ರದ ಮೂರ್ತಿಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.   ₹ 50 ರಿಂದ ₹ 20 ಸಾವಿರ ವರೆಗಿನ ಮೂರ್ತಿಯನ್ನು ಮಾರಾಟಕ್ಕೆ ಇಡಲಾಗಿದೆ. ಗ್ರಾಹಕರು ಮೂರ್ತಿ ಖರೀದಿಸಿ ಆಟೊ, ಟಾಟಾ ಎಸಿ, ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದರು. 

 

 

ಪ್ರಮುಖ ಸುದ್ದಿಗಳು