ಐದು ದಿನಗಳ ಕಾಲ ರಂಗತೇರಿನ ಸಂಭ್ರಮ

ಬಾಗಲಕೋಟೆ: ಇಲ್ಲಿನ ಬಿ.ಎಸ್.ಆರ್ ನಾಟಕ ಸಂಘ (ಗುಬ್ಬಿ) ಹಾಗೂ ಶಿವಮೊಗ್ಗದ ರಂಗಾಯಣದ ವತಿಯಿಂದ ’ರಂಗತೇರು’ ಹೆಸರಿನಲ್ಲಿ  ಸೆಪ್ಟೆಂಬರ್ 16ರಿಂದ 19ರ ವರೆಗೆ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ರಂಗಾಯಣದ ನಿರ್ದೇಶಕ ಎಂ.ಗಣೇಶ ಹೇಳಿದರು.

ಬಿ.ಎಸ್‌.ಆರ್ ನಾಟಕ ಕಂಪೆನಿಯ ಥಿಯೇಟರ್‌ನಲ್ಲಿಯೇ ಪ್ರದರ್ಶನ ನಡೆಯಲಿದೆ. ಸೆಪ್ಟೆಂಬರ್‌ 15ರ ವರೆಗೆ ಜೇವರ್ಗಿ ರಾಜಣ್ಣ  ರಚಿಸಿ ನಿರ್ದೇಶಿಸಿದ ‘ದುಬೈ ಧೂಳಪ್ಪ ಭರ್ಜರಿ ಗಾಳ’ ಪ್ರದರ್ಶನಗೊಳ್ಳಲಿದೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸೆಪ್ಟೆಂಬರ್ 16 ಹಾಗೂ 17 ರಂದು ತಮ್ಮ ರಚನೆಯ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನಗೊಳ್ಳಲಿದೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವೀಧರೆ ಸವಿತಾರಾಣಿ ನಿರ್ದೇಶಿಸಿರುವ ‘ಟ್ರಾನ್ಸನೇಷನ್’ ಎಂಬ ನಾಟಕ ಸೆ.18 ಹಾಗೂ 19 ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಮಧ್ಯಾಹ್ನ 3.15ಕ್ಕೆ ಹಾಗೂ ಸಂಜೆ 7ಕ್ಕೆ ಪ್ರದರ್ಶನಗೊಳ್ಳಿವೆ’ ಎಂದರು.

‘ದುಬೈ ಧೂಳಪ್ಪ ಭರ್ಜರಿ ಗಾಳ ನಾಟಕಕ್ಕೆ ₨ 50 ದರವನ್ನು ನಿಗದಿ ಮಾಡಿದ್ದು ಉಳಿದ ಎರಡು ನಾಟಕಗಳು ಉಚಿತವಾಗಿ ಪ್ರದರ್ಶನಗೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದರು.

‘ಶಿವಮೊಗ್ಗ, ಮೈಸೂರು, ಧಾರವಾಡ ಹಾಗೂ ಕಲಬುರ್ಗಿಯಲ್ಲಿ ಮಾತ್ರ ರಂಗಾಯಣಗಳಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರಂಗಾಯಣ ಪ್ರಾರಂಭಿಸುವ ಮೂಲಕ ಆಧುನಿಕ ರಂಗಭೂಮಿ ಪರಿಚಯ ಮಾಡಬೇಕಿದೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾದ ಉದ್ದೇಶದಿಂದ ರಂಗತೇರು ಹೆಸರಿನಲ್ಲಿ ರಾಜ್ಯಾದ್ಯಂತ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ’ ಎಂದರು.

ಬಿ.ಎಸ್.ಆರ್‌ ನಾಟಕ ಸಂಘದ ಮಾಲೀಕ ಜೇವರ್ಗಿ ರಾಜಣ್ಣ ಮಾತನಾಡಿ, ‘ಈ ನಾಟಕಗಳಲ್ಲಿ ಯಾವುದೇ ಅಶ್ಲೀಲ ಪದಗಳ ಬಳಕೆ ಮಾಡಿಲ್ಲ. ಹಾಸ್ಯಕ್ಕೆ ಒತ್ತು ನೀಡಿ ನಾಟಕಗಳನ್ನು ರಚಿಸಲಾಗಿದೆ. ಹತ್ತು ನಾಟಕಗಳಲ್ಲಿ ಒಂದು ಆಧುನಿಕ ನಾಟಕ ಇರಬೇಕೆಂಬ ಉದ್ದೇಶದಿಂದ ರಾಜ್ಯಾದಾದ್ಯಂತ ರಂಗಾಯಣ ನಾಟಕಗಳನ್ನು ಪ್ರದರ್ಶನ ಮಾಡುತ್ತಿದೆ’ ಎಂದರು.

‘ಉತ್ತರ ಕರ್ನಾಟಕದ ಭಾಗದಲ್ಲಿಯೂ ಕೂಡಾ ವೃತ್ತಿ ಹಾಗೂ ಆಧುನಿಕ ರಂಗಭೂಮಿ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ, ಇಳಕಲ್‌ನ ಸ್ನೇಹರಂಗದ ಮೂಲಕ ‘ಹುಚ್ಚರ ಸಂತೆ’ ನಾಟಕ, ಧಾರವಾಡದಲ್ಲಿ ‘ಶ್ರೀ ಕೃಷ್ಣ ಸಂದಾನ’ ಹಾಗೂ ಬೆಳಗಾವಿಯಲ್ಲಿ ‘ತಮಾಷಾ’ ಪ್ರದರ್ಶಿಸಲಾಗಿದೆ’ ಎಂದರು.

ಪ್ರಮುಖ ಸುದ್ದಿಗಳು