ಬೆಂಗಳೂರಿನಲ್ಲಿ ಅಪಘಾತ: ಅಂತ್ಯಕ್ರಿಯೆಗೆ ತೆರಳಿದ್ದ ನಾಲ್ವರ ದುರ್ಮರಣ

ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯ ದೊಡ್ಡನೆಕ್ಕುಂದಿ ಬಳಿ ಬುಧವಾರ ಮಧ್ಯಾಹ್ನ ಬಿಎಂಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ದೊಡ್ಡನೆಕ್ಕುಂದಿಯ ಲೆವಿನ್ (24), ಯಲಸಮ್ಮ (53), ನಿರ್ಮಲಾ (51) ಹಾಗೂ ರೀನಾ (52) ಮೃತರು. ಸಿರಿಜಾ (54) ಎಂಬುವರು ಗಾಯಗೊಂಡಿದ್ದು, ವೇದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಮಹಿಳೆಯರ ಸಂಬಂಧಿಯೊಬ್ಬರು ಮಂಗಳವಾರ ಅಸುನೀಗಿದ್ದರು. ಬೆಳಿಗ್ಗೆ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆಯರು, ಕಾರ್ಯ ಮುಗಿಸಿಕೊಂಡು ಪರಿಚಿತ ಲೆವಿನ್‌ ಅವರ ಸ್ಯಾಂಟ್ರೊ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು.

ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದಿರುವ ಲೆವಿನ್, ದೊಡ್ಡನೆಕ್ಕುಂದಿಯ ಇಸ್ರೊ ಜಂಕ್ಷನ್‌ನಲ್ಲಿ ತಿರುವು ಪಡೆಯುವಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಗುದ್ದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲೆವಿನ್ ಹಾಗೂ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಕ್ಷಣೆಗೆ ಧಾವಿಸಿದ ಸ್ಥಳೀಯರು, ಗಾಯಾಳುಗಳನ್ನು ಹೊರಗೆ ಎಳೆದು ವೈದೇಹಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಮಾರ್ಗಮಧ್ಯೆಯೇ ಯಲಸಮ್ಮ ಹಾಗೂ ನಿರ್ಮಲಾ ಕೂಡ ಕೊನೆಯುಸಿರೆಳೆದಿದ್ದಾರೆ.

ಪ್ರಮುಖ ಸುದ್ದಿಗಳು