2ನೇ ಮಗು:ಕರೀನಾ ಮಾತು

ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ಅವರ ಮಗ ತೈಮೂರ್‌ಗೆ ಡಿಸೆಂಬರ್‌ ತಿಂಗಳಿಗೆ ಎರಡು ವರ್ಷ ತುಂಬಲಿದೆ. ಹಾಗಾಗಿ ಅವರೀಗ ಎರಡನೇ ಮಗುವಿನ ಬಗ್ಗೆ ಆಲೋಚನೆ ಮಾಡುತ್ತಿದ್ದಾರಂತೆ. ಈ ವಿಚಾರವನ್ನು ಸ್ವತಃ ಕರೀನಾ ಬಹಿರಂಗಪಡಿಸಿದ್ದಾರೆ. 

ಬಾಲಿವುಡ್‌ನ ಸ್ಟಾರ್‌ ಮಕ್ಕಳಲ್ಲಿ ತೈಮೂರ್‌ ಯಾವಾಗಲೂ ಸುದ್ದಿಯಲ್ಲಿರುತ್ತಾನೆ. ತಾವು ಪ್ರವಾಸ ಹೋದಾಗ ಮಗನೊಂದಿಗೆ ತೆಗೆಸಿಕೊಳ್ಳುವ ಹಾಗೂ ಆತನ ತುಂಟಾಟಗಳ ಫೋಟೊಗಳನ್ನು ಕರೀನಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ಮುದ್ದಾಗಿರುವ ತೈಮೂರ್‌ ಫೋಟೊಗಳು ವೈರಲ್‌ ಆಗುತ್ತವೆ. 

ಈಚೆಗೆ ಷೋವೊಂದಕ್ಕೆ ನಟಿ ಅಮೃತಾ ಅರೋರ ಅವರ ಜೊತೆ ಕರೀನಾ ಭಾಗವಹಿಸಿದ್ದರು. ಆಗ ಅಲ್ಲಿ ತೈಮೂರ್‌ಗೆ ತಮ್ಮ ಅಥವಾ ತಂಗಿಯ ವಿಷಯ ಪ್ರಸ್ತಾಪವಾಗಿತ್ತು. ಅದಕ್ಕೆ ಉತ್ತರಿಸಿದ ಕರೀನಾ ‘ಮಗನಿಗೆ ಎರಡು ವರ್ಷವಾಗುವ ತನಕ ಆ ತರ ಯೋಚನೆಗಳಿಲ್ಲ. ಬಳಿಕ ಎರಡನೇ ಮಗು ಹೊಂದುವ ಬಗ್ಗೆ ನಾನು, ನನ್ನ ಗಂಡ ಚರ್ಚಿಸಿದ್ದೇವೆ’ ಎಂದು ಉತ್ತರಿಸಿದ್ದಾರೆ. 

ತೈಮೂರ್‌ ಹುಟ್ಟಿದ ನಂತರ ವ್ಯಾಯಾಮ, ಜಿಮ್‌ ವರ್ಕೌಟ್‌ ಮಾಡಿ ಕರೀನಾ ಸಣ್ಣಗಾಗಿದ್ದರು. ಮುಂಚಿನಂತೆ ಸಪೂರ ದೇಹಸಿರಿ ಹೊಂದಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

‘ವೀರೆ ದಿ ವೆಡ್ಡಿಂಗ್‌’ ಚಿತ್ರದ ಯಶಸ್ಸಿನ ಬಳಿಕ ಕರೀನಾ ಸದ್ಯ ಕರಣ್‌ ಜೋಹರ್‌ ಅವರ ‘ತಕ್ತ್‌’ ಸಿನಿಮಾದಲ್ಲಿ ನಟಿಸುತ್ತಿದ್ದು, ರಣವೀರ್‌ ಸಿಂಗ್‌, ಆಲಿಯಾ ಭಟ್‌, ವಿಕ್ಕಿ ಕೌಶಲ್‌, ಭೂಮಿ ಪಡ್ನೇಕರ್‌, ಜಾಹ್ನವಿ ಕಪೂರ್‌ ಹಾಗೂ ಅನಿಲ್‌ ಕಪೂರ್‌ ನಟಿಸುತ್ತಿದ್ದಾರೆ.

ಪ್ರಮುಖ ಸುದ್ದಿಗಳು