ಉಡುಪಿಯಲ್ಲಿ ಅತಿವೃಷ್ಟಿಗೆ 150 ಕೋಟಿ ನಷ್ಟ: ಜಿಲ್ಲಾಧಿಕಾರಿ ವರದಿ

ಉಡುಪಿ: ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಬುಧವಾರ ಕೇಂದ್ರದ ಅಧ್ಯಯನ ತಂಡದ ಅಧಿಕಾರಿಗಳು ಭೇಟಿನೀಡಿ ಹಾನಿ ಪರಿಶೀಲಿಸಿದರು.

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಹಾಗೂ ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ
ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ನಿಯೋಗವು ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಹಾನಿಗೀಡಾದ ರಸ್ತೆಗಳು, ಮೂಲಸೌಕರ್ಯ, ಬೆಳೆ ಹಾನಿ ಪ್ರದೇಶಗಳಿಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿತು.

ಮೊದಲು, ಕಾರ್ಕಳ ತಾಲ್ಲೂಕಿನ ಕುಕ್ಕಂದೂರು ಗ್ರಾಮದ ಜಯಂತಿನಗರ ಸರ್ಕಾರಿ ಶಾಲೆಗೆ ಭೇಟಿನೀಡಿದ ತಂಡ ಶಾಲೆಯ ದುಸ್ಥಿತಿಯನ್ನು ವೀಕ್ಷಣೆ ಮಾಡಿತು. ಬಳಿಕ, ಕಾರ್ಕಳ-ಉಡುಪಿ ರಸ್ತೆಗೆ ತೆರಳಿ ಪರಿಶೀಲನೆ ನಡೆಸಿತು.

ಬಳಿಕ ಕೊಳೆರೋಗದಿಂದ ಹಾನಿಗೀಡಾದ ಮೀಯಾರು ಗ್ರಾಮದ ಅಡಿಕೆ ತೋಟಗಳಿಗೆ ತೆರಳಿ, ಅತಿವೃಷ್ಟಿಗೆ ಸಿಲುಕಿ ಹಾಳಾದ ಅಡಿಕೆ ಮರಗಳನ್ನು ಪರಿಶೀಲಿಸಿತು. ಈ ವೇಳೆ ಬೆಳೆಗಾರರೊಂದಿಗೆ ಮಾತುಕತೆ ನಡೆಸಿ, ಅಹವಾಲುಗಳನ್ನು
ಆಲಿಸಿತು. ಬೆಳೆ ವಿಮೆಯಿಂದ ರೈತರಿಗಾಗಿರುವ ಪ್ರಯೋಜನಗಳ ಬಗ್ಗೆಯೂ ಬೆಳೆಗಾರರಿಂದ ಮಾಹಿತಿ ಪಡೆಯಲಾಯಿತು.

ನಂತರ ಹೊಸ್ಮಾರಿಗೆ ಭೇಟಿನೀಡಿದ ತಂಡ, ಈದು ಸೇತುವೆ ಹಾಗೂ ಸಂಪರ್ಕ ರಸ್ತೆಯನ್ನು ವೀಕ್ಷಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ನಷ್ಟದ ಅಂದಾಜು ಪಡೆಯಿತು. ನೂರಾಲ್ ಬೆಟ್ಟು ಗ್ರಾಮದ ಕಂಪೆಟ್ಟು ಬಳಿಯ ಗ್ರಾಮೀಣ ಸೇತುವೆ ಹಾಗೂ ಕೊಚ್ಚಿಹೋದ ಸಂಪರ್ಕ ರಸ್ತೆಯನ್ನು ಪರಿಶೀಲಿಸಿತು.

ನೂರಾಲ್‍ಬೆಟ್ಟು ಗ್ರಾಮದ ಒಳ ಪ್ರದೇಶವಾದ ಲಾಂದೇಲಿನಲ್ಲಿ ಮಳೆಗೆ ಕೊಚ್ಚಿಹೋಗಿದ್ದ ಕಾಲುಸಂಕ ಪ್ರದೇಶಕ್ಕೆ ತೆರಳಿದ ತಂಡ, ಮಧ್ಯಾಹ್ನ ಶಿರ್ವ ಸಮೀಪದ ಕಳತ್ತೂರು ಗುರ್ಮೆಗೆ ಹೋಗಿ ಹಾಳಾದ ಸೇತುವೆ, ಸಂಪರ್ಕ ರಸ್ತೆಯನ್ನು ವೀಕ್ಷಣೆ ಮಾಡಿತು.

ಬಳಿಕ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕೇಂದ್ರ ತಂಡಕ್ಕೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ
ಹಾಗೂ ಪ್ರಾಕೃತಿಕ ವಿಕೋಪಗಳ ಬಗ್ಗೆ ಸಮಗ್ರ ವಿವರ ನೀಡಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ಭೂಬಾಲನ್, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರಿಂಗ್ ಇಲಾಖೆ
ಅಧಿಕಾರಿಗಳು, ಕಾರ್ಕಳ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಕಂದಾಯ ಇಲಾಖೆಯ ಅಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿಗಳು