ಕನ್ನಡ ಭವನದ ಉದ್ಘಾಟನೆ 15ರಂದು

ಬೆಳಗಾವಿ: ಇಲ್ಲಿನ ನೆಹರುನಗರದಲ್ಲಿ ನಿರ್ಮಾಣವಾಗಿರುವ ಕನ್ನಡ ಭವನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದೇ 15ರಂದು ಬೆಳಿಗ್ಗೆ 1.30ಕ್ಕೆ ನೆರವೇರಿಸಲಿದ್ದಾರೆ ಎಂದು ಭವನದ ಉಸ್ತುವಾರಿ ಸಮಿತಿಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

12 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಸಂಗೀತ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುವುದು. ಭವನದ ನಿರ್ವಹಣೆಗಾಗಿ ಅವಶ್ಯಕ ಇರುವ ಹಣವನ್ನು ಹೊಂದಿಸಿಕೊಳ್ಳಲು ನೆಲಮಹಡಿಯಲ್ಲಿ ಅಂಗಡಿ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಮೇಲಿನ ಮಹಡಿಯಲ್ಲಿ ವೇದಿಕೆ ಹಾಗೂ 350 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸುವ ಗ್ಯಾಲರಿ ನಿರ್ಮಿಸಲಾಗಿದೆ. ಕಲಾವಿದರಿಗೆ ವಾಸ್ತವ್ಯ ಹೂಡಲು ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಕಸಾಪ ಹಾಗೂ ದಾನಿಗಳಿಂದ ಸಂಗ್ರಹಿಸಿದ ಸುಮಾರು ₹ 3.40 ಕೋಟಿ ವೆಚ್ಚದಲ್ಲಿ ಭವನವನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವೊಂದಿಷ್ಟು ಕೆಲಸಗಳು ಬಾಕಿ ಇವೆ, ಇದಕ್ಕಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಹೆಸರಿನಲ್ಲಿ ಜಾಗವಿದೆ. ಕಟ್ಟಡ ನಿರ್ಮಿಸಲು ಕಸಾಪ ಆರ್ಥಿಕ ಸಹಾಯ ಮಾಡಿದೆ. ಭವನದ ನಿರ್ವಹಣೆಯನ್ನು ನೋಡಿಕೊಳ್ಳಲು ಸಮಿತಿ ರಚಿಸಿಕೊಳ್ಳಲಾಗಿದೆ ಎಂದು ಸಾಂಸ್ಕೃತಿಕ ಕನ್ನಡ ಭವನ ಸಮಿತಿಯ ಸಂಯೋಜಕ ಯ.ರು. ಪಾಟೀಲ ನುಡಿದರು.

ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಸಮಿತಿಯ ಸದಸ್ಯ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿಗಳು