ಮೈಷುಗರ್‌ ಮುಂದೆ ಒಣಗುತ್ತಿದೆ ಕಬ್ಬು: ಪ್ರತಿಭಟನೆ

ಮಂಡ್ಯ: ಮೈಷುಗರ್‌ ಕಾರ್ಖಾನೆಯಲ್ಲಿ ನಿಯಮಿತವಾಗಿ ಕಬ್ಬು ಅರೆಯುತ್ತಿಲ್ಲ. ಕಟಾವು ಮಾಡಿದ ಕಬ್ಬು ಕಾರ್ಖಾನೆ ಆವರಣದಲ್ಲೇ ಒಣಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿ ರೈತರು ಬುಧವಾರ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು ದಿನದಿನಕ್ಕೂ ಕೆಲಸ ಸ್ಥಗಿತಗೊಳಿಸುತ್ತಿದೆ. ಒಂದು ದಿನ ನಡೆದರೆ ಮೂರು ದಿನ ನಿಂತಿರುತ್ತಿದೆ. ಯಂತ್ರಗಳಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವ ಕಾರಣ ಸರಿಯಾಗಿ ಕಬ್ಬು ಅರೆಯಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ಕಾರ್ಖಾನೆ ನಡೆಯುತ್ತಿದೆ ಎಂಬ ಕಾರಣದಿಂದ ನಾವು ಕಬ್ಬು ಕಟಾವು ಮಾಡಿದ್ದೇವೆ. ಕೆಲವರು ಕಾರ್ಖಾನೆಗೆ ತಂದು ಹಾಕಿದ್ದಾರೆ, ಇನ್ನೂ ಕೆಲವರು ಗದ್ದೆ ಬಳಿಯ ರಸ್ತೆ ಬದಿಯಲ್ಲೇ ಹಾಕಿದ್ದಾರೆ. ಕಬ್ಬು ಒಣಗುತ್ತಿರುವ ಕಾರಣ ಇಳುವರಿ ಕಮ್ಮಿಯಾಗಿ ನಷ್ಟ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿದರು.

ಕಬ್ಬು ತಂಬಿಕೊಂಡು ಬಂದು ಎತ್ತು, ಗಾಡಿಯೊಂದಿಗೆ ವಾರದಿಂದ ಕಾರ್ಖಾನೆ ಆವರಣದಲ್ಲೇ ನೆಲೆಸಿದ್ದೇವೆ. ಇಲ್ಲಿಗೆ ಬರುವ ರೈತರಿಗೆ ಯಾವುದೇ ಮೂಲ ಸೌಲಭ್ಯಗಳು ಇಲ್ಲ. ಶೌಚಾಲಯ, ವಸತಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದೇವೆ. ಸೊಳ್ಳೆ ಕಾಟದಿಂದ ರೋಗ ಭೀತಿ ಎದುರಾಗಿದೆ. ಗಾಡಿಯ ಕೆಳಗೆ ಮಲಗಿ ಕಾಲ ಕಳೆಯುತ್ತಿದ್ದೇವೆ. ಊಟ, ತಿಂಡಿ ಮಾಡದೇ ಉಪವಾಸ ಇದ್ದೇವೆ. ಕುಡಿಯುವ ನೀರೂ ಸಿಗುತ್ತಿಲ್ಲ. ಸಮರ್ಪಕವಾಗಿ ಕಾರ್ಖಾನೆ ಕಾರ್ಯ ನಿರ್ವಹಿಸಿದರೆ ನಾವು ಊರಿಗೆ ತೆರಳಬಹುದು. ಈ ಕುರಿತು ಯಾವುದೇ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಶಾಸಕ ಎಂ.ಶ್ರೀನಿವಾಸ್ ಭೇಟಿ:
ರೈತರ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಸಕ ಎಂ.ಶ್ರೀನಿವಾಸ್, ಕಾರ್ಖಾನೆ ವ್ಯವಸ್ಥಾಪಕ ಬೋರೇಗೌಡ ಅವರ ಜೊತೆ ಚರ್ಚೆ ಮಾಡಿದರು. ಕಬ್ಬು ಅರೆಯುವ ಸಾಮರ್ಥ್ಯ ಕಡಿಮೆಯಿದ್ದರೂ ಹೆಚ್ಚಿನ ಕಬ್ಬು ಕಟಾವು ಮಾಡಲು ಏಕೆ ಆದೇಶ ನೀಡುತ್ತೀರಿ? ರೈತರು ಬೆಳೆದ ಕಬ್ಬನ್ನು ಕಟಾವು ಮಾಡಿ ರಸ್ತೆಯಲ್ಲಿ ಒಣಗುವಂತೆ ಮಾಡಿದರೆ ಕಬ್ಬಿನ ಇಳುವರಿ ಕಡಿಮೆಯಾಗುತ್ತದೆ. ಈಗಾಗಲೇ ಕಟಾವು ಮಾಡಿರುವ ಕಬ್ಬನ್ನು ಅರೆದು ಖಾಲಿ ಮಾಡುವವರೆಗೂ ಕನಿಷ್ಠ ಮೂರು ದಿನಗಳ ಕಾಲ ಕಬ್ಬು ಕಟಾವು ಮಾಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ರೈತರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಮುಂದಿನ ಒಂದು ವಾರದಲ್ಲಿ ಕಾರ್ಖಾನೆಗೆ ಕಬ್ಬು ತಂದ ರೈತರಿಗೆ ಹಾಗೂ ವಾಹನ ಚಾಲಕರಿಗೆ ಕುಡಿಯಲು ನೀರು, ಶೌಚಾಲಯ ಸೇರಿ ಮೂಲ ಸೌಕರ್ಯ ಒದಗಿಸಬೇಕು. ಇಲ್ಲಿ ಕಬ್ಬು ತಂದಿರುವ ಎತ್ತುಗಳಿಗೂ ಮೇವು, ಕುಡಿಯುವ ನೀರಿಲ್ಲ. ಎತ್ತಿನ ಸಗಣೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಕಾರ್ಖಾನೆ ಆರಂಭಿಸಲು ₹ 20 ಕೋಟಿ ಬಿಡುಗಡೆ ಮಾಡಿಸಿ, ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕಾರ್ಖಾನೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದು, ಆಡಳಿತ ಮಂಡಳಿ ದುರಾಡಳಿತದಿಂದ ಕನಸು ನನಸಾಗುವುದಿಲ್ಲ ಎಂಬ ಆತಂಕ ಮೂಡಿದೆ. ಕಾರ್ಖಾನೆ ನಿರ್ದೇಶಕರು ಅನ್ಯ ಕಾರ್ಯದ ನಿಮಿತ್ತ ಬೇರೆಡೆ ಹೋಗಿದ್ದಾರೆ. ದೂರವಾಣಿ ಮೂಲಕ ಮಾತನಾಡಿ ಕಾರ್ಖಾನೆಯಲ್ಲಿ ಸಣ್ಣ ಪುಟ್ಟ ದುರಸ್ತಿ ಕಾರ್ಯ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿದಿನ 3 ಸಾವಿರ ಟನ್‌ ಕಬ್ಬು ಅರೆಯುವಂತೆ ಮಾಡಬೇಕು. ಗೌರಿ ಗಣೇಶ ಹಬ್ಬ ಮುಗಿದ ನಂತರ ರೈತರಿಗೆ ಆಗುತ್ತಿರುವ ಸಮಸ್ಯೆಗಳು ನಿವಾರಣೆ ಆಗಬೇಕು. ಇಲ್ಲದಿದ್ದರೆ ಕಾರ್ಖಾನೆ ಆವರಣದಲ್ಲೇ ಠಿಕಾಣಿ ಹೂಡಿ ರೈತರೊಂದಿಗೆ ಪ್ರತಿಭಟನೆಗೆ ಇಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದರು.

ವ್ಯವಸ್ಥಾಪಕ ಬೋರೇಗೌಡ ಮಾತನಾಡಿ ‘ಸದ್ಯ ಕಾರ್ಖಾನೆ ಸುಸ್ಥಿತಿಗೆ ತರಲು ಒಂದು ವಾರ ಸಮಯ ಬೇಕು. ಪ್ರತಿದಿನ ಸರಾಸರಿ 2 ಸಾವಿರ ಟನ್ ಅರೆಯಲಾಗುತ್ತಿದೆ. ಸಮಸ್ಯೆ ಇರುವ ಯಂತ್ರ ದುರಸ್ತಿ ಮಾಡಿ ಪ್ರತಿನಿತ್ಯ ಮೂರು ಸಾವಿರ ಟನ್‌ ಕಬ್ಬು ನುರಿಸಲು ಕ್ರಮ ಕೈಗೊಳ್ಳುತ್ತೇವೆ. ಕಾರ್ಖಾನೆಗೆ ಕಬ್ಬು ತಂದ ರೈತರಿಗೆ ಹಾಗೂ ಲಾರಿ ಚಾಲಕರಿಗೆ ಮೂಲ ಸೌಕರ್ಯ ಒದಗಿಸುತ್ತೇವೆ’ ಎಂದು ಹೇಳಿದರು. ನಗರಸಭೆ ಸದಸ್ಯರಾದ ನಾಗೇಶ್, ಮಂಜು, ಕೀಲಾರ ಗ್ರಾಮ ಪಂಚಾಯಿತಿ  ಸದಸ್ಯ ರಮೇಶ್, ನಾಗರತ್ನ ಇದ್ದರು.

ಪ್ರಮುಖ ಸುದ್ದಿಗಳು