ಕಳೆಗಟ್ಟಿದ ಗೌರಿ ಹಬ್ಬದ ಸಂಭ್ರಮ

ತುಮಕೂರು: ತುಮಕೂರು: ಬಾಗಿಲಲ್ಲಿ ಬಗೆ ಬಗೆಯ ತೋರಣ, ಹೂವಿನ ಶೃಂಗಾರ, ಮನೆ ಮುಂದೆ ಆಕರ್ಷಕ ರಂಗೋಲಿ, ಸಾಂಪ್ರದಾಯಿಕ ಉಡುಗೆಯಲ್ಲಿ ನಗು ಮೊಗದಿ ಸ್ವಾಗತಿಸುವ ಮಹಿಳೆಯರು...

ಇದು ನಗರದಲ್ಲಿ ಬುಧವಾರ ಕಂಡು ಬಂದ ಗೌರಿ ಹಬ್ಬದ ಸಂಭ್ರಮದ ನೋಟವಿದು. ಮಹಿಳೆಯರು ಮನೆಯಲ್ಲಿ ಮಂಟಪ, ಕಳಶದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಗೌರಿ ಪೂಜೆ ನೇರವೇರಿಸಿದರು.

ಹಲವರು ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸುಂದರವಾಗಿ ಅಲಂಕಾರ ಮಾಡಿದ್ದರೆ ಇನ್ನೂ ಅನೇಕರು ತೆಂಗಿನ ಕಾಯಿಗೆ ಗೌರಿ ಅಲಂಕಾರ ಮಾಡಿ ಪೂಜಿಸಿದರು.

ಆಭರಣ, ಬಣ್ಣ ಬಣ್ಣದ ಸೀರೆ, ಕುಂಕುಮ, ದೀಪಗಳಿಂದ ಗೌರಿದೇವಿಯನ್ನು ಅಂಲಕರಿಸಿದ್ದರು. ಇದಕ್ಕೆ ಇನ್ನಷ್ಟು ಮೆರಗು ನೀಡುವ ರೀತಿ ವಿವಿಧ ಬಗೆಯ ಹೂವು, ಬಾಳೆ ಗಿಡ, ಹಣ್ಣುಗಳಿಂದ ಅಲಂಕಾರ ಮಾಡಿದ್ದು ಕಂಡು ಬಂದಿತು.

ಗೌರಿಗೆ ಮಹಿಳೆಯರು ಆರತಿ ಬೆಳಗಿ ಬಾಗಿನ ನೀಡಿ ಆರಾಧಿಸಿದರು. ಹೋಳಿಗೆ, ಕರ್ಚಿಕಾಯಿ, ರವೆ ಉಂಡೆ, ಪಾಯಸ ನೈವೇದ್ಯ ಮಾಡಿದರು.

ಕುಟುಂಬದವರೆಲ್ಲ ಸೇರಿ ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬದಡುಗೆ ಊಟ ಮಾಡಿದರು. ಸೀರೆ, ಬಳೆ, ಅರಿಶಿನ, ಕುಂಕುಮ ಹಾಗೂ ಫಲಪುಷ್ಪಗಳ ಬಾಗಿನ ನೀಡಿದರು.

ನಗರದ ಬಹುತೇಕ ದೇವಸ್ಥಾನಗಳಲ್ಲಿ ಗೌರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿ.ಎಚ್. ರಸ್ತೆಯ ಟಿಜಿಎಂಸಿ ಮಹಾಲಕ್ಷ್ಮಿ ದೇವಸ್ಥಾನ, ಸೋಮೇಶ್ವರ ದೇವಸ್ಥಾನದಲ್ಲಿ ಗೌರಿ ಪೂಜೆ ವ್ಯವಸ್ಥೆ ಮಾಡಲಾಗಿತ್ತು. 

ಪ್ರಮುಖ ಸುದ್ದಿಗಳು